ಅಸಿಡಿಟಿ, ಸದ್ಯ ಎಲ್ಲರನ್ನು ಕಾಡ್ತಿರುವ ಸಾಮಾನ್ಯ ಸಮಸ್ಯೆ. ಕಣ್ಣಿಗೆ ಕಾಣದ, ಸದಾ ಕಿರಿಕಿರಿ ನೀಡುವ ರೋಗಗಳಲ್ಲಿ ಅಸಿಡಿಟಿ ಕೂಡ ಒಂದು. ಇಂದಿನ ಜೀವನಶೈಲಿ, ಆಹಾರ ಪದ್ಧತಿ ಇದಕ್ಕೆ ಮುಖ್ಯ ಕಾರಣವಾಗಿದೆ. ಸಮಸ್ಯೆ ಸಾಮಾನ್ಯವೆನಿಸಿದ್ರೂ, ಕೆಲವೊಮ್ಮೆ ಇದು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತದೆ.
ಬಿಸಿ ಪದಾರ್ಥಗಳನ್ನು ಅಥವಾ ಎಣ್ಣೆ ಆಹಾರವನ್ನು ಅತಿ ಹೆಚ್ಚು ಸೇವನೆ ಮಾಡುವುದು ಇದಕ್ಕೆ ದೊಡ್ಡ ಕಾರಣವಾಗ್ತಿದೆ. ಕರಿದ ಹಾಗೂ ಬಿಸಿ ಬಿಸಿ ಪದಾರ್ಥ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಇದು ಅಸಿಡಿಟಿಗೆ ಕಾರಣವಾಗುತ್ತದೆ. ಈ ಸಮಸ್ಯೆಯಿಂದ ಹೊರ ಬರಬೇಕೆಂದ್ರೆ ಮೊದಲು ಆಹಾರ ಪದ್ಧತಿ ಬದಲಾಗಬೇಕು.
ಅಸಿಡಿಟಿಯಿಂದ ಬಳಲುವ ವ್ಯಕ್ತಿಗಳು ಯಾವ ಆಹಾರ ಸೇವನೆ ಮಾಡಬೇಕು ಎಂಬುದನ್ನು ತಿಳಿಯಬೇಕು.
ಬಾಳೆಹಣ್ಣು : ಬಾಳೆಹಣ್ಣು ಆರೋಗ್ಯಕರ. ಕ್ಯಾಲ್ಸಿಯಂ ಮತ್ತು ಕಬ್ಬಿಣ ಸಮೃದ್ಧವಾಗಿದೆ. ಬಾಳೆಹಣ್ಣು ತಿನ್ನುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುವುದಿಲ್ಲ. ಇದು ಆಂಟಿ ಆಕ್ಸಿಡೆಂಟ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳಿಂದ ಕೂಡಿದೆ. ಇದು ಆಮ್ಲ ರಿಫ್ಲಕ್ಸ್ ಕಡಿಮೆ ಮಾಡುತ್ತದೆ. ಬಾಳೆಹಣ್ಣು ಹೊಟ್ಟೆಯ ಒಳಪದರದಲ್ಲಿ ಲೋಳೆಯನ್ನು ಉತ್ಪಾದಿಸುತ್ತದೆ. ಇದು ಪಿಎಚ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಬಹಳಷ್ಟು ಫೈಬರ್ ಇದ್ದು ಅದು ಆಮ್ಲೀಯತೆಯನ್ನು ನಿಯಂತ್ರಿಸುತ್ತದೆ.
ಕಲ್ಲಂಗಡಿ : ಕಲ್ಲಂಗಡಿ ದೇಹದಲ್ಲಿ ನೀರಿನ ಕೊರತೆಯನ್ನು ಕಡಿಮೆ ಮಾಡುತ್ತದೆ. ಇದ್ರಿಂದ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಕಲ್ಲಂಗಡಿಯಲ್ಲೂ ಬಾಳೆಹಣ್ಣಿನಂತೆ ಫೈಬರ್ ಇದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಉಪಯುಕ್ತ. ಆಹಾರ ಸರಿಯಾಗಿ ಜೀರ್ಣವಾದರೆ ಹೊಟ್ಟೆಯಲ್ಲಿ ಗ್ಯಾಸ್ ರೂಪುಗೊಳ್ಳುವುದಿಲ್ಲ. ಅಸಿಡಿಟಿ ಸಮಸ್ಯೆಯಿಂದ ಬಳಲುವವರು ಕಲ್ಲಂಗಡಿ ಹಣ್ಣನ್ನು ಅವಶ್ಯವಾಗಿ ಸೇವಿಸಬೇಕು.
ಸೌತೆಕಾಯಿ : ಸೌತೆಕಾಯಿ ಸೇವನೆಯಿಂದ ದಿನವಿಡೀ ಹೊಟ್ಟೆ ತಂಪಾಗಿರುತ್ತದೆ. ಸೌತೆಕಾಯಿಯಲ್ಲಿ ಸಾಕಷ್ಟು ನೀರಿನಂಶವಿದ್ದು, ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಸೌತೆಕಾಯಿ ಸೇವನೆಯಿಂದ ಬೇಸಿಗೆಯಲ್ಲಿ ನಿರ್ಜಲೀಕರಣದ ಸಮಸ್ಯೆ ದೂರವಾಗುತ್ತದೆ.
ಎಳೆನೀರು : ಬೆಳಿಗ್ಗೆ ಟೀ ಅಥವಾ ಕಾಫಿ ಸೇವನೆ ಮಾಡುವ ಬದಲು ಎಳೆ ನೀರಿನ ಸೇವೆನ ರೂಢಿ ಮಾಡಿಕೊಳ್ಳಿ. ಟೀ ಅಥವಾ ಕಾಫಿ ಅಸಿಡಿಟಿ ಸಮಸ್ಯೆ ಹೆಚ್ಚಿಸುತ್ತದೆ. ಬೆಳಿಗ್ಗೆ ಬೇಗನೆ ಎಳೆ ನೀರು ಕುಡಿಯುವುದರಿಂದ ದೇಹ ವಿಷಮುಕ್ತವಾಗುತ್ತದೆ. ತೆಂಗಿನ ನೀರಿನಲ್ಲಿ ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ಇದು ದೇಹದ ಜೀರ್ಣಕ್ರಿಯೆಯನ್ನು ಸರಿ ಮಾಡುತ್ತದೆ.