ದಹಿಪುರಿ ಭಾರತದ ಜನಪ್ರಿಯ ಸ್ಟ್ರೀಟ್ ಫುಡ್. ಸಾಯಂಕಾಲದ ಹೊತ್ತಿನಲ್ಲಿ ತಿನ್ನಲು ಹೇಳಿ ಮಾಡಿಸಿದಂತಹ ತಿನಿಸು ಇದು. ಸಿಹಿ- ಖಾರದ ಮಿಶ್ರಣ, ಜೊತೆಗೆ ಮೊಸರು ಸಖತ್ ಟೇಸ್ಟ್ ಕೊಡುತ್ತೆ.
ಖಾರಖಾರವಾದ ಪಾನಿಪುರಿ ಅಥವಾ ಬೇಲ್ ಪುರಿ ತಿಂದ ಮೇಲೆ ಒಂದು ಪ್ಲೇಟ್ ದಹಿಪುರಿ ತಿಂದ್ರೆ ಅದರ ಮಜಾನೇ ಬೇರೆ. ದಹಿಪುರಿಯನ್ನು ಹೇಗೆ ಮಾಡೋದು ಅನ್ನೋದನ್ನು ನೋಡೋಣ.
ಬೇಕಾಗುವ ಸಾಮಗ್ರಿ : 6 ಪುರಿ, ಬೇಯಿಸಿ ಸಿಪ್ಪೆ ತೆಗೆದ ಅರ್ಧ ಆಲೂಗಡ್ಡೆ, ಗಟ್ಟಿಯಾದ ತಾಜಾ ಮೊಸರು 1 ಕಪ್, 1 ಚಮಚ ಸಕ್ಕರೆ, ಸಣ್ಣಗೆ ಹೆಚ್ಚಿದ ಅರ್ಧ ಈರುಳ್ಳಿ, ಸಣ್ಣಗೆ ಹೆಚ್ಚಿದ ಅರ್ಧ ಟೊಮೆಟೋ, ಅರ್ಧ ಕಪ್ ಸೇವು, 5 ಚಮಚ ಹುಣಿಸೆ ರಸ, 3 ಚಮಚ ಗ್ರೀನ್ ಚಟ್ನಿ, ಚಿಟಿಕೆ ಕೆಂಪು ಮೆಣಸಿನ ಪುಡಿ, ಚಿಟಿಕೆ ಚಾಟ್ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, 3 ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ : ನಿಮ್ಮ ಬೆರಳಿನಿಂದ ಪುರಿಯ ಮಧ್ಯೆ ತೂತು ಮಾಡಿಕೊಳ್ಳಿ. ಪ್ರತಿ ಪುರಿಯಲ್ಲೂ ಅರ್ಧ ಚಮಚದಷ್ಟು ಸ್ಮಾಶ್ ಮಾಡಿಟ್ಟ ಆಲೂಗಡ್ಡೆ ತುಂಬಿಸಿ. ಒಂದು ಕಪ್ ಮೊಸರು ತೆಗೆದುಕೊಂಡು ಅದಕ್ಕೆ ಒಂದು ಚಮಚ ಸಕ್ಕರೆ ಹಾಕಿ ಕದಡಿ. ಆ ಮಿಶ್ರಣವನ್ನು ಪುರಿಯಲ್ಲಿ ಸ್ವಲ್ಪ ಸ್ವಲ್ಪ ಹಾಕಿ. ಬಳಿಕ ಸ್ವಲ್ಪ ಹೆಚ್ಚಿದ ಈರುಳ್ಳಿ, ಟೊಮೆಟೋ ಹಾಕಿ. ನಂತರ ಎಲ್ಲಾ ಪುರಿಗಳ ಮೇಲೂ ಸೇವು ಉದುರಿಸಿ, ಅದಾದ ಮೇಲೆ ಹುಣಸೆ ಹಣ್ಣಿನ ರಸವನ್ನು ಹಾಕಿ. ಹಸಿರು ಚಟ್ನಿಯನ್ನೂ ಹಾಕಿದ ಬಳಿಕ ಮತ್ತೊಮ್ಮೆ ಎಲ್ಲಾ ಪುರಿಗಳಲ್ಲೂ ಸ್ವಲ್ಪ ಸ್ವಲ್ಪ ಮೊಸರು ಹಾಕಿಕೊಳ್ಳಿ. ಅದರ ಮೇಲೆ ಸ್ವಲ್ಪ ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲಾ, ಚಿಟಿಕೆ ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿದ್ರೆ ರುಚಿಯಾದ ದಹಿ ಪುರಿ ಸಿದ್ಧ.