ನೀವು ಚಾಕ್ಲೇಟ್ ಪ್ರಿಯರೇ…? ಹಾಗಿದ್ದರೆ ನೀವು ಹೆಚ್ಚು ಹೆಚ್ಚು ಚಾಕ್ಲೇಟ್ ತಿನ್ನಲು ಇನ್ನೊಂದು ಕಾರಣ ಇಲ್ಲಿದೆ. ಡಾರ್ಕ್ ಚಾಕ್ಲೇಟುಗಳು ಆರೋಗ್ಯಕ್ಕೆ ಸಾಕಷ್ಟು ಅನುಕೂಲ ಮಾಡಿಕೊಡಲಿವೆ. ನಿಗದಿತ ಪ್ರಮಾಣದಲ್ಲಿ ಡಾರ್ಕ್ ಚಾಕ್ಲೇಟುಗಳನ್ನು ಸೇವಿಸಿದರೆ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಈ ಹಿಂದಿನ ಅಧ್ಯಯನಗಳು ಹೇಳಿದ್ದವು.
ಅಧ್ಯಯನವೊಂದರ ಪ್ರಕಾರ ಡಾರ್ಕ್ ಚಾಕ್ಲೇಟ್ ತಿನ್ನುವುದು ಒಳ್ಳೆಯದು. ಡಾರ್ಕ್ ಚಾಕ್ಲೇಟ್ ತಿನ್ನುವುದರಿಂದ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ಡಾರ್ಕ್ ಚಾಕ್ಲೇಟ್ ಅನ್ನು ತಿಂದರೆ ಖಿನ್ನತೆಗೆ ಒಳಗಾಗುವ ಪ್ರಮಾಣ ಕಡಿಮೆಯಾಗುತ್ತದೆ. ಇದು ವ್ಯಕ್ತಿಯ ಮೂಡ್ ನಲ್ಲಿ ಬದಲಾವಣೆ ತರುತ್ತದೆ ಮತ್ತು ಖಿನ್ನತೆಯ ಲಕ್ಷಣಗಳನ್ನು ದೂರ ಮಾಡುತ್ತದೆ ಎಂದು ಹೇಳಿದೆ.
ಇತ್ತೀಚಿನ ದಿನಗಳಲ್ಲಿ ಯುವ ಜನಾಂಗದಲ್ಲಿ ಖಿನ್ನತೆಯೆಂಬುದು ಸಾಮಾನ್ಯವಾಗಿದೆ. ಇದಕ್ಕೆ ಹಲವಾರು ಕಾರಣಗಳಿರುತ್ತವೆ. ಈ ಹಿನ್ನೆಲೆಯಲ್ಲಿ ನಡೆಸಿರುವ ಅಧ್ಯಯನದ ಪ್ರಕಾರ, ಡಾರ್ಕ್ ಚಾಕ್ಲೇಟ್ ತಿನ್ನುವುದರಿಂದ ಖಿನ್ನತೆಯ ಲಕ್ಷಣಗಳನ್ನು ತಲೆಯಿಂದ ಹೊರ ಹಾಕಲಾಗುತ್ತದೆ.
ಇದಿಷ್ಟೇ ಅಲ್ಲ, ಈ ಚಾಕ್ಲೇಟ್ ರಕ್ತ ಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಲೋ ಬಿಪಿಯನ್ನು ಸುಧಾರಣೆ ಮಾಡುತ್ತದೆ. ಹಾಗಂತ ಡಾರ್ಕ್ ಚಾಕ್ಲೇಟ್ ನ್ನು ಹೊಟ್ಟೆ ಬಿರಿಯುವಷ್ಟು ತಿಂದರೆ ವ್ಯತಿರಿಕ್ತ ಪರಿಣಾಮ ಬೀರದೇ ಇರದು. ಹೀಗಾಗಿ ನಿಗದಿತ ಪ್ರಮಾಣದಲ್ಲಿ ತಿಂದರೆ ಆರೋಗ್ಯಕ್ಕೆ ಉತ್ತಮ.