ವಯಸ್ಸು 35 ದಾಟಿ 40 ಹತ್ತಿರವಾಗುತ್ತಿದ್ದಂತೆ, ಕ್ಯಾಲ್ಸಿಯಂಯುಕ್ತ ಆಹಾರ ಸೇವನೆ ಅತೀ ಅವಶ್ಯವಾಗುತ್ತದೆ. ಹಾಲು, ಮೊಸರು ಮತ್ತು ಚೀಸ್ ನಂಥ ಹಾಲಿನ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಅತ್ಯಧಿಕವಾಗಿರುತ್ತವೆ. ಅಧಿಕ ಕ್ಯಾಲ್ಸಿಯಂ ಹೊಂದಿರುವ ಡೈರಿ ಉತ್ಪನ್ನಗಳ ಜೊತೆಗೆ ಬ್ರೋಕ್ಲಿ, ಹಸಿರು ತರಕಾರಿಗಳ ಸೇವನೆಯೂ ಅವಶ್ಯ. ಬದಾಮ್ ಮತ್ತು ಸೋಯಾ ಮಿಲ್ಕ್ ಗಳನ್ನ ದಿನ ನಿತ್ಯ ಕುಡಿಯುವುದರಿಂದ ಕ್ಯಾಲ್ಸಿಯಂ ಹೆಚ್ಚಿಸಿಕೊಳ್ಳಬಹುದು. ಮೀನು ಕೂಡ ಅತ್ಯಧಿಕ ಕ್ಯಾಲ್ಸಿಯಂಯುಕ್ತ ಆಹಾರವಾಗಿದೆ.
ವಯಸ್ಸು 20ರಿಂದ 35ರ ತನಕ ದೇಹ ಸುಮಾರು 1000 ಮಿ.ಗ್ರಾಂ. ದಿಂದ 1200 ಮಿ.ಗ್ರಾಂ. ವರೆಗೆ ಕ್ಯಾಲ್ಸಿಯಂ ಹೊಂದಿರುತ್ತದೆ. ಆದರೆ ವಯಸ್ಸಾಗುತ್ತಾ ಬಂದಂತೆ ದೇಹದಲ್ಲಿಯ ಕ್ಯಾಲ್ಸಿಯಂ ಪ್ರಮಾಣ ತಗ್ಗಲು ಪ್ರಾರಂಭವಾಗುತ್ತದೆ. ಹೀಗಾಗಿ ವೈದ್ಯರ ಸಲಹೆ ಪಡೆದು ರಕ್ತ ಪರೀಕ್ಷೆ ಮಾಡಿಸಿ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.
ವಯಸ್ಸಿನ ಪ್ರಕಾರ ನಮ್ಮ ದೇಹದಲ್ಲಿ ಇರಬೇಕಾದ ಕ್ಯಾಲ್ಸಿಯಂ ಪ್ರಮಾಣ
ವಯಸ್ಸು ಗಂಡು ಹೆಣ್ಣು
0–6 ತಿಂಗಳು 200 mg 200 mg
7–12 ತಿಂಗಳು 260 mg 260 mg
1–3 ವರ್ಷ 700 mg 700 mg
4–8 ವರ್ಷ 1,000 mg 1,000 mg
9–13 ವರ್ಷ 1,300 mg 1,300 mg
14–18 ವರ್ಷ 1,300 mg 1,300 mg
19–50 ವರ್ಷ 1,000 mg 1,000 mg
51–70 ವರ್ಷ 1,000 mg 1,200 mg
71+ ವರ್ಷ 1,200 mg 1,200 mg
ವ್ಯಾಯಾಮ ಪ್ರಾರಂಭಿಸಿ
ದಿನನಿತ್ಯ ದೈಹಿಕವಾಗಿ ನಿಷ್ಕ್ರಿಯರಾಗಿರುವ ಜನರಲ್ಲಿ ಮೂಳೆ ಶಕ್ತಿಹೀನವಾಗಲು ಪ್ರಾರಂಭಿಸುತ್ತದೆ. ಹೀಗಾಗಿ, ನಿಮ್ಮ ಮೂಳೆಯ ಬಲವನ್ನು ಹೆಚ್ಚಿಸಲು ದಿನನಿತ್ಯ ವ್ಯಾಯಾಮ ಮಾಡಬೇಕು. ಜಾಗಿಂಗ್, ಏರೋಬಿಕ್ಸ್, ನೃತ್ಯ, ಟೆನ್ನಿಸ್ ಮತ್ತು ಬ್ಯಾಸ್ಕೆಟ್ ಬಾಲ್ ಆಟಗಳು ಸಹ ಎಲುಬುಗಳ ಆರೋಗ್ಯವನ್ನ ಹೆಚ್ಚಿಸುತ್ತವೆ. ನಿಮ್ಮ ವೈದ್ಯರು ನಿಮಗೆ ಯಾವ ವ್ಯಾಯಾಮವನ್ನ ಸೂಚಿಸುತ್ತಾರೋ ಅದನ್ನ ದಿನನಿತ್ಯ ತಪ್ಪದೇ ಮಾಡಲು ಮರೆಯದಿರಿ.
ಧೂಮಪಾನ ಮತ್ತು ಅತಿಯಾದ ಮದ್ಯಪಾನದಿಂದ ದೂರವಿರಿ
ಸಂಶೋಧನೆಯ ಪ್ರಕಾರ ತಂಬಾಕು ಮೂಳೆಯ ಶಕ್ತಿಯನ್ನ ಕುಂದಿಸುತ್ತದೆ. ಹೀಗಾಗಿ ಧೂಮಪಾನವನ್ನ ಬಿಟ್ಟುಬಿಡಿ. ದಿನನಿತ್ಯ ಕುಡಿಯುವ ಅಭ್ಯಾಸ ಹೊಂದಿರುವುದು ಕೂಡ ಅತ್ಯಂತ ಅಪಾಯ. ಏಕೆಂದರೆ ಆಹಾರದ ಮೂಲಕ ಕ್ಯಾಲ್ಸಿಯಂ ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಆಲ್ಕೋಹಾಲ್ ಕುಂದಿಸುತ್ತದೆ.