ಕೊರೊನಾ ಕಾಲದಲ್ಲಿ ಜನರು ಮನೆಯಿಂದ ಹೊರಗೆ ಹೋಗಿ ದುಡಿಯಲು ಭಯಪಡ್ತಿದ್ದಾರೆ. ಮತ್ತೆ ಕೆಲವರು ಈಗಾಗಲೇ ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ. ಮನೆಯಲ್ಲೇ ಕುಳಿತು ಹಣ ಸಂಪಾದಿಸುವ ಅನೇಕ ವಿಧಾನಗಳ ಬಗ್ಗೆ ಈಗಾಗ್ಲೇ ಹೇಳಿದ್ದೇವೆ. ಇಂದು ಮನೆಯಲ್ಲೇ ಕುಳಿತು ಕೈತುಂಬಾ ಸಂಪಾದನೆ ಮಾಡಬಹುದಾದ ಕೃಷಿಯೊಂದರ ಬಗ್ಗೆ ಹೇಳ್ತೆವೆ.
ಸಾಮಾನ್ಯವಾಗಿ ಕೃಷಿಗೆ ದೊಡ್ಡ ಜಾಗಬೇಕು. ಆದ್ರೆ ಈ ಕೃಷಿಯನ್ನು ಮನೆಯ ಟೆರೆಸ್ ಅಥವಾ ಬೆಡ್ ರೂಮಿನಲ್ಲಿಯೂ ಮಾಡಬಹುದು. ಯಸ್, ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿಯಲ್ಲಿರುವ ಸೂಪರ್ ಫುಡ್ ಮೈಕ್ರೊಗ್ರೀನ್ ಗಳಿಕೆಗೆ ದಾರಿ ಮಾಡಿಕೊಡ್ತಿದೆ.
ಹಣ್ಣುಗಳು ಮತ್ತು ತರಕಾರಿಗಳಿಗಿಂತ ಸುಮಾರು 40 ಪಟ್ಟು ಹೆಚ್ಚಿನ ಪೋಷಣೆಯನ್ನು ಹೊಂದಿರುತ್ತದೆ. ಹಾಗಾಗಿ ಇದ್ದಕ್ಕಿದ್ದಂತೆ ಮಾರುಕಟ್ಟೆಯಲ್ಲಿ ಅದರ ಬೇಡಿಕೆ ಹೆಚ್ಚಾಗಿದೆ. ಕೆಲವು ಜನರು ಈಗಾಗಲೇ ಈ ಬ್ಯುಸಿನೆಸ್ ಶುರು ಮಾಡಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ.
ಯಾವುದೇ ಸಸ್ಯದ ಆರಂಭಿಕ ಎಲೆಗಳನ್ನು ಮೈಕ್ರೊಗ್ರೀನ್ಸ್ ಎಂದು ಕರೆಯಲಾಗುತ್ತದೆ. ಮೂಲಂಗಿ, ಸಾಸಿವೆ, ಮೆಂತೆ ಇತರ ಬೀಜಗಳ ಆರಂಭಿಕ ಎಲೆಗಳನ್ನು ಮೈಕ್ರೊಗ್ರೀನ್ಸ್ ಎಂದು ಕರೆಯಲಾಗುತ್ತದೆ. ಇದು ಸುಮಾರು 2-3 ಇಂಚು ಉದ್ದವಿರುತ್ತದೆ. ಬೀಜ ಮೊಳಕೆಯೊಡೆದು ಸಣ್ಣ ಸಣ್ಣ ಎಲೆಗಳು ಹೊರಬರ್ತಿರುತ್ತವೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿ. ಪ್ರತಿದಿನ ಕೇವಲ 50 ಗ್ರಾಂ ಮೈಕ್ರೊಗ್ರೀನ್‌ಗಳನ್ನು ಸೇವಿಸಿದರೆ, ಎಲ್ಲಾ ಪೌಷ್ಠಿಕಾಂಶದ ಕೊರತೆಗಳು ದೂರವಾಗುತ್ತವೆ.
ಮೈಕ್ರೊಗ್ರೀನ್‌ಗಳನ್ನು ಬೆಳೆಸುವುದು ತುಂಬಾ ಸುಲಭ. ಯಾರಾದರೂ, ಇದನ್ನು ಎಲ್ಲಿ ಬೇಕಾದರೂ ಬೆಳೆಸಬಹುದು. ಮಣ್ಣು ಅಥವಾ ಕೊಕೊ ಪೀಟ್, ಸಾವಯವ ಗೊಬ್ಬರ ಅಥವಾ ಮನೆಯಲ್ಲಿ ತಯಾರಿಸಿದ ರಸಗೊಬ್ಬರಗಳು, ಟ್ರೇಗಳು ಮತ್ತು ಬೀಜಗಳು ಬೇಕಾಗುತ್ತವೆ. ಈ ಬೆಳೆಯನ್ನು ಬಲವಾದ ಸೂರ್ಯನ ಬೆಳಕಿನಿಂದ ರಕ್ಷಿಸುವುದು ಅವಶ್ಯಕ. ಪ್ರತಿದಿನ ಲಘುವಾಗಿ ನೀರು ಸಿಂಪಡಿಸಬೇಕು.
ಕಡಿಮೆ ವೆಚ್ಚದಲ್ಲಿ ಇದನ್ನು ಶುರು ಮಾಡಬಹುದು. ಎರಡು ಮೂರು ವಾರಗಳಲ್ಲಿ ಉತ್ತಮ ಹಣ ಗಳಿಸಬಹುದು. ಇದನ್ನು 5 ಸ್ಟಾರ್ ಹೋಟೆಲ್‌ಗಳು, ಕೆಫೆಗಳು, ಸೂಪರ್‌ಮಾರ್ಕೆಟ್‌ಗಳಲ್ಲಿ ಮಾರಾಟ ಮಾಡಬಹುದು. ಸಣ್ಣ ಅಂಗಡಿ ತೆರೆದು ಅಲ್ಲಿಯೂ ಮಾರಾಟ ಶುರು ಮಾಡಬಹುದು.