ಆರೋಗ್ಯವಾಗಿರಲು ದೈಹಿಕವಾಗಿ ಸಕ್ರಿಯವಾಗಿರುವುದು ಬಹಳ ಮುಖ್ಯ. ನಿಯಮಿತವಾದ ವ್ಯಾಯಾಮ ಮತ್ತು ಯೋಗದ ಮೂಲಕ ಫಿಟ್ ಆಗಿರಬಹುದು. ಇದರ ಜೊತೆಜೊತೆಗೆ ಸಣ್ಣ-ಪುಟ್ಟ ದೈನಂದಿನ ಅಭ್ಯಾಸಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವುಗಳಲ್ಲೊಂದು ಮೆಟ್ಟಿಲು ಹತ್ತುವುದು.
ಮೆಟ್ಟಿಲುಗಳನ್ನು ಹತ್ತುವುದರಿಂದ ಸ್ನಾಯುಗಳನ್ನು ಬಲಪಡಿಸಬಹುದು ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ. ವಿಶೇಷವಾಗಿ ಹೃದಯಾಘಾತವನ್ನು ತಡೆಯಲು ಈ ಅಭ್ಯಾಸ ಬಹಳ ಸಹಕಾರಿಯಾಗಿದೆ. ಹೃದಯವನ್ನು ಬಲಪಡಿಸಲು ಪ್ರತಿದಿನ ಎಷ್ಟು ಮೆಟ್ಟಿಲುಗಳನ್ನು ಹತ್ತಬೇಕು ಎಂಬುದು ಸಹ ಬಹಳ ಮುಖ್ಯ.
ವಿಜ್ಞಾನಿಗಳ ಹೊಸ ಅಧ್ಯಯನದ ಪ್ರಕಾರ ಪ್ರತಿದಿನ 50 ಮೆಟ್ಟಿಲುಗಳನ್ನು ಹತ್ತುವುದು ಹೃದ್ರೋಗದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಮೆಟ್ಟಿಲುಗಳನ್ನು ಹತ್ತುವವರಿಗೆ ಹೃದ್ರೋಗದ ಅಪಾಯವು ಇತರರಿಗಿಂತ ಶೇ.20ರಷ್ಟು ಕಡಿಮೆ ಇರುತ್ತದೆ. ಜಿಮ್‌ಗೆ ಹೋಗಲು ಅಥವಾ ದೀರ್ಘ ನಡಿಗೆಗೆ ಸಮಯ ಸಿಗದೇ ಇದ್ದರೆ ಮೆಟ್ಟಿಲು ಹತ್ತುವ ಮೂಲಕ ಫಿಟ್ನೆಸ್ ಕಾಪಾಡಿಕೊಳ್ಳಬಹುದು.
ಮೆಟ್ಟಿಲುಗಳನ್ನು ಹತ್ತುವುದರಿಂದ ದೇಹದಲ್ಲಿ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ (ಎಚ್‌ಡಿಎಲ್) ಮಟ್ಟ ಹೆಚ್ಚಾಗುತ್ತದೆ. ಇದನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಡರ್ಟಿ ಕೊಲೆಸ್ಟ್ರಾಲ್ ಎಂದು ಕರೆಯಲ್ಪಡುವ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) ಮಟ್ಟವು ಕಡಿಮೆಯಾಗುತ್ತದೆ. ಇದರಿಂದಾಗಿ ಹೃದಯದಲ್ಲಿ ಯಾವುದೇ ಅಡಚಣೆಯಿರುವುದಿಲ್ಲ ಮತ್ತು ಹೃದಯಾಘಾತದ ಸಾಧ್ಯತೆಯು ಬಹಳ ಕಡಿಮೆಯಾಗುತ್ತದೆ.
ಲಿಫ್ಟ್ ಬಳಸುವ ಬದಲು ಮೆಟ್ಟಿಲುಗಳನ್ನು ಹತ್ತುವ ಅಭ್ಯಾಸ ಮಾಡಿಕೊಂಡರೆ ಬೊಜ್ಜು ಕೂಡ ಕಡಿಮೆ ಮಾಡಬಹುದು. ಇದು ಕೀಲು ಮತ್ತು ಮೂಳೆಗಳನ್ನು ಸಹ ಬಲಪಡಿಸುತ್ತದೆ. ಕೇವಲ ಮೆಟ್ಟಿಲುಗಳನ್ನು ಹತ್ತಿದರೆ ಸಾಲದು, ಹೃದಯವನ್ನು ಆರೋಗ್ಯವಾಗಿಡಲು ಸಮತೋಲಿತ ಆಹಾರ, ಸಾಕಷ್ಟು ನಿದ್ರೆ ಮತ್ತು ಒತ್ತಡ ಮುಕ್ತವಾಗಿರುವುದು ಸಹ ಮುಖ್ಯ. ಇದರ ಜೊತೆಗೆ ಧೂಮಪಾನ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು.