ಬೇಸಿಗೆಯಲ್ಲಿ ಏನಾದರೂ ತಂಪಾಗಿರುವ ಆಹಾರವನ್ನು ತಿನ್ನಬೇಕು, ಕುಡಿಬೇಕು ಅನಿಸುವುದು ಸಹಜ. ಈ ಸಮಯದಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಸೂಪ್/ ತಾಜಾ ಹಣ್ಣುಗಳ ಜ್ಯೂಸ್ ಮಾಡಿಕೊಂಡು ಸವಿದರೆ ಚೆನ್ನಾಗಿರುತ್ತದೆ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡುವ ರಾಗಿ ಸೂಪ್ ಮಾಡುವ ವಿಧಾನ ಇದೆ ನೋಡಿ. ಆರೋಗ್ಯಕರ ರಾಗಿ ಸೂಪ್ ಎಲ್ಲಾ ಕಾಲದಲ್ಲೂ ಸಹ ಸೇವಿಸಬಹುದು.
ಬೇಕಾಗುವ ಸಾಮಾಗ್ರಿಗಳು-ರಾಗಿ-3 ಚಮಚ, ಬೀನ್ಸ್-3 ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ, ಕ್ಯಾರೆಟ್-1, ಈರುಳ್ಳಿ-1 ಮಧ್ಯಮ ಗಾತ್ರದ್ದು, ಬಟಾಣಿ-3 ಟೇಬಲ್ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ಕಾಳುಮೆಣಸಿನ ಪುಡಿ-1/2 ಟೀ ಸ್ಪೂನ್, ನೀರು-ಅಗತ್ಯವಿರುವಷ್ಟು, ಎಣ್ಣೆ, 1 ಟೀ ಸ್ಪೂನ್, ಜೀರಿಗೆ-1 ಟೀ ಸ್ಪೂನ್.
ಮೊದಲಿಗೆ ಒಂದು ಬೌಲ್ ಗೆ ತರಕಾರಿಗಳನ್ನೆಲ್ಲಾ ಹಾಕಿ ಚೆನ್ನಾಗಿ ತೊಳೆದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ರಾಗಿ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಜೀರಿಗೆ ಹಾಕಿ. ನಂತರ ಈರುಳ್ಳಿ ಹಾಕಿ ಅದು ಕೆಂಪಾಗುತ್ತಲೆ ಕತ್ತರಿಸಿಟ್ಟುಕೊಂಡ ತರಕಾರಿ ಹಾಕಿ.
ನಂತರ ಎಷ್ಟು ಬೇಕೋ ಅಷ್ಟು ನೀರನ್ನು ಸೇರಿಸಿ ಉಪ್ಪು ಹಾಕಿ ಬೇಯಿಸಿ. ತರಕಾರಿ ಬೆಂದ ಕೂಡಲೇ ರಾಗಿ ಹಿಟ್ಟು ಸೇರಿಸಿ ಕೈ ಬಿಡದೆ ತಿರುಗಿಸುತ್ತಾ ಇರಿ. ನಂತರ ಅದಕ್ಕೆ ಕಾಳು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಿಸಿ ಬಿಸಿ ಇರುವಾಗಲೇ ಸೇವಿಸಿ. ದೇಹಕ್ಕೂ ತಂಪು. ಆರೋಗ್ಯಕ್ಕೂ ಒಳ್ಳೆಯದು.