ಹುಳಿ, ಖಾರ, ಸಿಹಿ ಎಲ್ಲವೂ ಮಿಳಿತವಾಗಿರುವ ಈ ಗೊಜ್ಜನ್ನು ಮದುವೆ ಮನೆಗಳಲ್ಲಿ, ಹಬ್ಬಗಳಲ್ಲಿ ಹೆಚ್ಚಾಗಿ ತಯಾರಿಸ್ತಾರೆ. ಅನ್ನದ ಜೊತೆಗೆ ಅನಾನಸ್ ಗೊಜ್ಜು ಒಳ್ಳೆ ಕಾಂಬಿನೇಶನ್. ದೋಸೆ ಮತ್ತು ಇಡ್ಲಿಯ ಜೊತೆಗೂ ಇದನ್ನು ತಿನ್ನಬಹುದು. ಬೆಂಗಳೂರು, ಮೈಸೂರು, ಉಡುಪಿ, ಮಂಗಳೂರು ಹೀಗೆ ಎಲ್ಲಾ ಕಡೆಗಳಲ್ಲೂ ಈ ಕರ್ರಿ ಬಳಕೆಯಲ್ಲಿದೆ.
ಬೇಕಾಗುವ ಸಾಮಗ್ರಿ : ಒಂದು ಕಪ್ ಹೆಚ್ಚಿದ ಅನಾನಸ್, ಒಂದೂವರೆ ಕಪ್ ನೀರು, ಕಾಲು ಕಪ್ ಹುಣಿಸೆ ಹಣ್ಣಿನ ರಸ, 5 ಚಮಚ ಬೆಲ್ಲ, ಅರ್ಧ ಚಮಚ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ಮಸಾಲಾ ತಯಾರಿಸಲು ಅರ್ಧ ಚಮಚ ಸಾಸಿವೆ, 3 ಚಮಚ ಎಣ್ಣೆ, 2 ಚಮಚ ಉದ್ದಿನ ಬೇಳೆ, ಅರ್ಧ ಚಮಚ ಮೆಂತ್ಯ, 6 ಕೆಂಪು ಮೆಣಸಿನ ಕಾಯಿ, ಕರಿಬೇವಿನ ಎಲೆ, ಮುಕ್ಕಾಲು ಕಪ್ ನಷ್ಟು ತೆಂಗಿನ ತುರಿ, ಅರ್ಧ ಕಪ್ ನೀರು. ವಗ್ಗರಣೆಗೆ 2 ಚಮಚ ತೆಂಗಿನ ಎಣ್ಣೆ, 1 ಚಮಚ ಸಾಸಿವೆ, ಒಂದು ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆ.
ಮಾಡುವ ವಿಧಾನ : ಹೆಚ್ಚಿದ ಅನಾನಸ್ ಗೆ ನೀರು ಹಾಕಿ 10 ನಿಮಿಷ ಬೇಯಿಸಿಕೊಳ್ಳಿ. ನಂತರ ಮಸಾಲಾ ತಯಾರಿಸಿ. ಅದಕ್ಕಾಗಿ ಎಣ್ಣೆ, ಉದ್ದಿನ ಬೇಳೆ, ಮೆಂತ್ಯ, ಕೆಂಪು ಮೆಣಸಿನ ಕಾಯಿ, ಕರಿಬೇವಿನ ಎಲೆ ಎಲ್ಲವನ್ನೂ ಹುರಿದುಕೊಳ್ಳಿ. ಅದಕ್ಕೆ ತೆಂಗಿನ ತುರಿ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅದನ್ನು ಪಕ್ಕಕ್ಕೆ ಇಡಿ.
ಬೇಯಿಸಿಕೊಂಡ ಅನಾನಸ್ ಗೆ ಅರಿಶಿನ, ಉಪ್ಪು, ಬೆಲ್ಲ ಬೆರೆಸಿ ಎಲ್ಲವನ್ನೂ ಮಿಶ್ರಣ ಮಾಡಿ ಒಲೆಯ ಮೇಲಿಟ್ಟು ಕುದಿಸಿ. ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿಕೊಳ್ಳಿ. ಅಗತ್ಯವಿದ್ದಲ್ಲಿ ಸ್ವಲ್ಪ ನೀರನ್ನು ಬೆರೆಸಿ 10 ನಿಮಿಷ ಕುದಿಸಿ. ಆಗಾಗ ಸೌಟಿನಿಂದ ತಿರುವುತ್ತಿರಿ. ರೆಡಿಯಾದ ಪೈನಾಪಲ್ ಕರ್ರಿಗೆ ವಗ್ಗರಣೆ ಹಾಕಿದ್ರೆ ಸವಿಯಲು ಸಿದ್ಧ.