ಚಪಾತಿ, ಪಲಾವ್, ಪರೋಟ, ಗೀ ರೈಸ್ ಮಾಡಿದಾಗ ತಿನ್ನುವುದಕ್ಕೆ ರಾಯಿತಾ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ದಾಳಿಂಬೆ ಹಣ್ಣು ಬಳಸಿ ಮಾಡುವ ಸುಲಭವಾದ ರಾಯಿತ ಇದೆ. ಮನೆಯಲ್ಲಿ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
1 ½ ಕಪ್-ಮೊಸರು, ½ ಕಪ್- ದಾಳಿಂಬೆ ಹಣ್ಣಿನ ಬೀಜ, ½ ಟೀ ಸ್ಪೂನ್-ಉಪ್ಪು, ½ ಟೀ ಸ್ಪೂನ್- ಜೀರಿಗೆ ಪುಡಿ, ¼ ಟೀ ಸ್ಪೂನ್-ಕಾಳುಮೆಣಸಿನ ಪುಡಿ, ½ ಟೀ ಸ್ಪೂನ್-ಸಕ್ಕರೆ, ½ ಟೇಬಲ್ ಸ್ಪೂನ್-ಕೊತ್ತಂಬರಿಸೊಪ್ಪು.
ಮಾಡುವ ವಿಧಾನ:
ಒಂದು ಬೌಲ್ ಗೆ ದಾಳಿಂಬೆ ಹಣ್ಣಿ ಬೀಜಗಳನ್ನು ಹಾಕಿ. ಇದರಿಂದ 2 ಟೇಬಲ್ ಸ್ಪೂನ್ ದಾಳಿಂಬೆ ಬೀಜಗಳನ್ನು ತೆಗೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ದಾಳಿಂಬೆ ಹಣ್ಣಿನ ಬೀಜವಿರುವ ಬೌಲ್ ಗೆ ಮೊಸರು, ಜೀರಿಗೆ ಪುಡಿ, ಉಪ್ಪು, ಸಕ್ಕರೆ, ಕಾಳುಮೆಣಸಿನ ಪುಡಿ ಸೇರಿಸಿ ಮಿಕ್ಸ್ ಮಾಡಿ.
ನಂತರ ರುಬ್ಬಿಟ್ಟುಕೊಂಡ ದಾಳಿಂಬೆ ಹಣ್ಣಿನ ರಸ ಸೇರಿಸಿ ಕೊತ್ತಂಬರಿಸೊಪ್ಪು ಹಾಕಿ ಮಿಕ್ಸ್ ಮಾಡಿ. ಇದನ್ನು ಫ್ರಿಡ್ಜ್ ನಲ್ಲಿಟ್ಟು ಕೂಡ ಸರ್ವ್ ಮಾಡಬಹುದು.