ಡ್ರೈ ಸ್ಕಿನ್ ಸಮಸ್ಯೆ ಹಲವರನ್ನು ಕಾಡುತ್ತಿರುತ್ತದೆ. ಚರ್ಮ ಶುಷ್ಕತೆ ಕಳೆದುಕೊಂಡು ಮೃದುವಾಗಲು ಕೆಲವೊಂದು ಮನೆಮದ್ದುಗಳನ್ನು ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಾಧ್ಯವಾದಷ್ಟು ನೀರನ್ನು ಕುಡಿಯಿರಿ. ನಿಮ್ಮ ದೇಹವನ್ನು ಹೈಡ್ರೈಟ್ ಆಗಿಡುವಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಿ.
ಡ್ರೈಸ್ಕಿನ್‌ನಿಂದ ಮುಕ್ತಿ ಪಡೆಯಲು ನೀವು ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್‌ಗಳನ್ನು ಸಹ ಬಳಸಬಹುದು. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ, ಮತ್ತು ಹೈಡ್ರೇಟ್ ಆಗಿಡುತ್ತದೆ. ನೈಸರ್ಗಿಕ ಪದಾರ್ಥಗಳನ್ನು ಬಳಸಿ ಈ ಫೇಸ್ ಪ್ಯಾಕ್ ಅನ್ನು ತಯಾರಿಸಬಹುದು.
ಈ ಫೇಸ್ ಪ್ಯಾಕ್‌ಗಳಲ್ಲಿ ಓಟ್ಸ್, ಜೇನುತುಪ್ಪ, ಮೊಸರು, ಕಡಲೆ ಹಿಟ್ಟು, ಪಪ್ಪಾಯ ಮತ್ತು ಕಿತ್ತಳೆ ರಸ ಇತ್ಯಾದಿಗಳನ್ನು ಬಳಸಲಾಗುತ್ತದೆ. ಮನೆಯಲ್ಲೇ ಈ ಫೇಸ್ ಪ್ಯಾಕ್ ತಯಾರಿಸಬಹುದು. ನೀವು ಮಲಗುವ ಮುನ್ನ ಅಥವಾ ದಿನದ ಯಾವುದೇ ಸಮಯದಲ್ಲಿ ಅವುಗಳನ್ನು ಮುಖಕ್ಕೆ ಹಚ್ಚಿಕೊಳ್ಳಬಹುದು.
ಕಡಲೆ ಹಿಟ್ಟು ಮತ್ತು ಮೊಸರಿನ ಫೇಸ್ ಪ್ಯಾಕ್……
ಒಂದು ಬೌಲ್‌ನಲ್ಲಿ ಎರಡು ಚಮಚ ಕಡಲೆ ಹಿಟ್ಟನ್ನು ತೆಗೆದುಕೊಳ್ಳಿ, ಅದಕ್ಕೆ ಒಂದು ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಸಂಪೂರ್ಣವಾಗಿ ಒಣಗಲು ಬಿಡಿ. ನಂತರ ಮುಖಕ್ಕೆ ಮಸಾಜ್ ಮಾಡುವ ಮೂಲಕ ಅದನ್ನು ಸ್ವಚ್ಛಗೊಳಿಸಿ. ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ.
ಓಟ್ಸ್ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್……
ಒಂದು ಬೌಲ್‌ನಲ್ಲಿ ಒಂದು ಚಮಚ ಓಟ್ಸ್ ತೆಗೆದುಕೊಳ್ಳಿ, ಅದಕ್ಕೆ ಅರ್ಧ ಚಮಚ ಜೇನುತುಪ್ಪ ಸೇರಿಸಿ. ನಂತರ ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಅದನ್ನು ಹಾಗೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ಈ ಫೇಸ್ ಪ್ಯಾಕ್ ಅನ್ನು ನೀವು ವಾರಕ್ಕೆ ಎರಡು ಬಾರಿ ಬಳಸಬಹುದು.
ಕಿತ್ತಳೆ ರಸ ಮತ್ತು ಓಟ್ಸ್ ಫೇಸ್ ಪ್ಯಾಕ್……
ಒಂದು ಬೌಲ್‌ನಲ್ಲಿ ಅರ್ಧ ಕಪ್ ತಾಜಾ ಕಿತ್ತಳೆ ರಸವನ್ನು ತೆಗೆದುಕೊಳ್ಳಿ. ನಂತರ ಅದಕ್ಕೆ ಎರಡು ಚಮಚ ಓಟ್ಸ್ ಸೇರಿಸಿ. ರಸದಲ್ಲಿ ಸ್ವಲ್ಪ ಹೊತ್ತು ನೆನೆಯಲು ಬಿಡಿ. ನಂತರ ಈ ಮಿಶ್ರಣವನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ. ಸುಮಾರು 20 ನಿಮಿಷಗಳ ಕಾಲ ಅದನ್ನು ಹಾಗೇ ಒಣಗಲು ಬಿಡಿ. ನಂತರ ಮುಖ ತೊಳೆದುಕೊಂಡು ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.
ಅಲೋವೆರಾ ಮತ್ತು ಸೌತೆಕಾಯಿ ಫೇಸ್ ಪ್ಯಾಕ್…..
ಒಂದು ಬೌಲ್‌ನಲ್ಲಿ ಒಂದು ಚಮಚ ಅಲೋವೆರಾ ಜೆಲ್ ತೆಗೆದುಕೊಳ್ಳಿ. ಇದಕ್ಕೆ ತುರಿದ ಸೌತೆಕಾಯಿಯನ್ನು ಸೇರಿಸಿ. ನಂತರ ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಎಲ್ಲಾ ಭಾಗಗಳಿಗೆ ಅನ್ವಯಿಸಿ. ಅದನ್ನು 30 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.
ಪಪ್ಪಾಯ ಫೇಸ್ ಪ್ಯಾಕ್……
ಮಾಗಿದ ಪಪ್ಪಾಯಿಯನ್ನು ಕತ್ತರಿಸಿ ಅದರಿಂದ ಎರಡು ಸಣ್ಣ ತುಂಡುಗಳನ್ನು ತೆಗೆದುಕೊಳ್ಳಿ. ಅದನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಂಡು ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ. ನಂತರ ಅದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ. ಈ ಪಪ್ಪಾಯ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಚರ್ಮ ಮೃದುವಾಗುತ್ತದೆ.