ಗೋವು ಕೇವಲ ಪ್ರಾಣಿಯಲ್ಲ, ಅದು ತಾಯಿ ಸಮಾನ. ಗೋವು 68 ಕೋಟಿ ಪವಿತ್ರ ಸ್ಥಳಗಳು ಮತ್ತು 33 ಕೋಟಿ ದೇವರುಗಳ ಆವಾಸಸ್ಥಾನವಾಗಿದ್ದು, ಅದರ ರಕ್ತ ಭೂಮಿಗೆ ಬೀಳದ ದಿನ ಭೂಮಂಡಲದ ಎಲ್ಲ ಸಮಸ್ಯೆಗಳೂ ನಿವಾರಣೆಯಾಗಿ ಸುಖ ಶಾಂತಿ ನೆಲೆಸುತ್ತದೆ ಎಂದು ಗುಜರಾತ್ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದಿಂದ ಗುಜರಾತಿಗೆ ಅಕ್ರಮವಾಗಿ ಜಾನುವಾರು ಸಾಗಿಸಿದ್ದ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸುವ ವೇಳೆ ತಾಪಿ ನ್ಯಾಯಾಲಯದ ನ್ಯಾಯಾಧೀಶ ಸಮೀರ್ ವಿನೋದ್ ಚಂದ್ರ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿಶ್ವದಲ್ಲಿ ಗೋವುಗಳು ನೀಡುವ ನೆರವನ್ನು ಬಣ್ಣಿಸಲು ಅಸಾಧ್ಯ ಎಂದಿದ್ದಾರೆ.
ಹೀಗಾಗಿ ಗೋ ಹತ್ಯೆ ಸಂಪೂರ್ಣವಾಗಿ ನಿಷೇಧ ಮಾಡಬೇಕೆಂದು ಹೇಳಿದ ನ್ಯಾಯಾಧೀಶರು, ಇದಾಗದ ಹೊರತು ಸಮಾಜದಲ್ಲಿ ಶಾಂತಿ ಸ್ಥಾಪನೆಯಾಗುವುದು ಕಷ್ಟ. ಗೋ ಹತ್ಯೆ ತಡೆದಾಗ ಮಾತ್ರ ಭೂಮಿಯ ಮೇಲಿನ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದು ತಿಳಿಸಿದ್ದಾರೆ.