ಬೆಂಗಳೂರು: ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಮತ್ತು ಭೂಕಂಪನ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ ಇಂದು ಭೇಟಿ ನೀಡಿ ಪರಿಶೀಲನೆ ನಡೆಸುವರು.
ಎರಡು ಜಿಲ್ಲೆಗಳಲ್ಲಿ ಮಳೆ ಹಾನಿ ಹಾಗೂ ಭೂಕಂಪನ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಚಿವರು ಪರಿಶೀಲನೆ ನಡೆಸಲಿದ್ದಾರೆ. ಎರಡು ಜಿಲ್ಲೆಗಳಿಗೆ ಭೇಟಿ ನೀಡಲಿರುವ ಸಚಿವರು ಸ್ಥಳೀಯರಿಂದ ಮಾಹಿತಿ ಪಡೆಯುವರು. ಭೂಕುಸಿತ ಮತ್ತು ಮಳೆ ಹಾನಿ ಬಗ್ಗೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಲಿದ್ದಾರೆ.
ಬೆಳಿಗ್ಗೆ 10.30 ಕ್ಕೆ ಸಂಪಾಜೆ -ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ ನಡೆಸುವರು. ಬೆಳಗ್ಗೆ 11.15ಕ್ಕೆ ಪದೇ ಪದೇ ಭೂಕಂಪನ ಉಂಟಾದ ಚಂಬು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಮಳೆ ಹಾನಿ, ಭೂಕುಸಿತ ವೀಕ್ಷಣೆ, ಗ್ರಾಮಸ್ಥರ ಸಮಸ್ಯೆಯನ್ನು ಸಚಿವರು ಆಲಿಸಲಿದ್ದಾರೆ.
ನಂತರ ಭೂಕಂಪ ಮಾಪನ ಅಳವಡಿಸಿರುವ ಶಾಲೆಗೆ ಭೇಟಿ ನೀಡಲಿದ್ದಾರೆ. ಭೂಕಂಪದ ಬಗ್ಗೆ ಪರಿಶೀಲನೆ ನಡೆಸಲು ಬಂದಿರುವ ತಜ್ಞರೊಂದಿಗೆ ಸಚಿವರು ಚರ್ಚೆ ನಡೆಸಲಿದ್ದು, ಮಧ್ಯಾಹ್ನ 1 ಗಂಟೆಗೆ ಆರಂತೋಡು ಭೂಕಂಪನ ಪ್ರದೇಶಕ್ಕೆ ಭೇಟಿ ನೀಡುವರು. ಸಂಜೆ 4 ಗಂಟೆಗೆ ಉಳ್ಳಾಲ, ಬಟ್ಟಂಪಾಡಿ ಕಡಲ ಕೊರೆತ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಸಂಜೆ 4.30ಕ್ಕೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಲಿದ್ದಾರೆ.