ಕೆಲವೊಮ್ಮೆ ಯಾವುದೇ ಕೆಲಸ ಮಾಡಲು ಅಥವಾ ಕಚೇರಿಗೆ ತೆರಳಲು ಭಾರೀ ಸೋಮಾರಿತನ ಕಾಡುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸಾಗುವುದಿಲ್ಲ. ಹಾಗಾದರೆ ಆ ದಿನವನ್ನು ಫ್ರೆಶ್ ಆಗಿಸುವುದು ಹೇಗೆ?
ಮುಖ್ಯವಾಗಿ ಜಡತ್ವ ಕಾಡಲು ಕಾರಣವೆಂದರೆ ಸರಿಯಾಗಿ ನಿದ್ದೆ ಮಾಡದಿರುವುದು. ರಾತ್ರಿ ಆರರಿಂದ ಏಳು ಗಂಟೆ ಹೊತ್ತು ನಿದ್ದೆ ಮಾಡುವುದರಿಂದ ಬೆಳಗೆದ್ದಾಕ್ಷಣ ನಿಮ್ಮ ಮೂಡ್ ಚೆನ್ನಾಗಿರುತ್ತದೆ. ನಿದ್ದೆ ಕಡಿಮೆಯಾದರೆ ಕಿರಿಕಿರಿ, ತಲೆನೋವು, ಜಡತ್ವ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮಲಗಲು ಮತ್ತು ಏಳಲು ಸರಿಯಾದ ವೇಳಾಪಟ್ಟಿಯನ್ನು ಅನುಸರಿಸುವುದು ಬಹಳ ಮುಖ್ಯ.
ಬೆಳಿಗ್ಗೆ ಎದ್ದಾಕ್ಷಣ 20ರಿಂದ 40 ನಿಮಿಷ ಹೊತ್ತು ವ್ಯಾಯಮ ಮಾಡಿ. ಇದು ಆಲಸ್ಯವನ್ನು ಹೊಡೆದೋಡಿಸುತ್ತದೆ. ದೇಹ ಬೆವರುವುದರಿಂದ ತ್ವಚೆಯಲ್ಲಿರುವ ಕಲ್ಮಶಗಳೂ ದೂರವಾಗುತ್ತವೆ. ದೇಹ ಚುರುಕಾಗುತ್ತದೆ ಮತ್ತು ಮನಸ್ಸು ಕ್ರಿಯಾಶೀಲವಾಗಿ ಕೆಲಸ ಮಾಡಲು ಸಜ್ಜಾಗುತ್ತದೆ.
ಅತಿ ಹೆಚ್ಚು ತಿನ್ನುವುದರಿಂದಲೂ ಕೆಲಸಕ್ಕೆ ಮನಸ್ಸು ಒಗ್ಗಿಕೊಳ್ಳುವುದಿಲ್ಲ. ಅದರ ಬದಲು ಎಷ್ಟು ಬೇಕೋ ಅಷ್ಟೇ ತಿನ್ನಿ. ರುಚಿ ಚೆನ್ನಾಗಿದೆ ಎಂದು ಎರಡು ಬಟ್ಟಲು ಉಂಡರೆ ಮಧ್ಯಾಹ್ನದ ಬಳಿಕ ನಿದ್ದೆ ಬರುತ್ತದೆಯೇ ಹೊರತು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.