
ಬೆಂಗಳೂರು: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ದೇಶದ ಅಸಂಘಟಿತ ಕಾರ್ಮಿಕರ ದತ್ತಾಂಶವನ್ನು ಸಂಗ್ರಹಿಸಲು ಪ್ರಾರಂಭಿಸಿರುವ ‘ಇ-ಶ್ರಮ್’ ಪೋರ್ಟಲ್‌ನಲ್ಲಿ ಅರ್ಹ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡು ಸರ್ಕಾರಗಳ ಸಾಮಾಜಿಕ ಸುರಕ್ಷೆ ನೀಡುವ ಜನ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಕೋರಲಾಗಿದೆ.
ಸಂಘಟಿತ ಕಾರ್ಮಿಕರನ್ನು ನೋಂದಾಯಿಸುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮಾಜಿಕ ಸುರಕ್ಷೆ ನೀಡುವ ಜನ ಕಲ್ಯಾಣ ಯೋಜನೆಗಳು ದೊರಕುವಂತೆ ಸಹಾಯ ಮಾಡಲಿದ್ದು, ಈ ಪೋರ್ಟಲ್‌ನಲ್ಲಿ ನೋಂದಾಯಿಸಿರುವ ಪ್ರತಿ ಅಸಂಘಟಿತ ಕಾರ್ಮಿಕ ವಲಯದ ಶ್ರಮಜೀವಿ ಆಕಸ್ಮಿಕ ಅಪಘಾತಕ್ಕೆ ಒಳಗಾದ ಕುಟುಂಬದ ಅವಲಂಬಿತರಿಗೆ 2 ಲಕ್ಷ ರೂ. ಮೊತ್ತದ ಪರಿಹಾರ ದೊರೆಯುತ್ತದೆ. ಅಸಂಘಟಿತ ಕಾರ್ಮಿಕರು ಶಾಶ್ವತ ಅಂಗವೈಕಲ್ಯ ಹೊಂದಿದವರೂ ಈ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಹಾಗೂ ಅಲ್ಪ ಪ್ರಮಾಣದ ಅಂಗವೈಕಲ್ಯ ಹೊಂದಿದವರು 1 ಲಕ್ಷ ರೂ. ಪರಿಹಾರ ಪಡೆಯಲು ಅವಕಾಶವಿರುತ್ತದೆ.
ಇ-ಶ್ರಮ್’ ಪೋರ್ಟಲ್‌ನಲ್ಲಿ ನೋಂದಣಿ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ಶುಲ್ಕವನ್ನು ಪಾವತಿಸದೆ, ಫಲಾನುಭವಿಗಳು ತಮ್ಮ ನಿವಾಸದ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ, ನೋಂದಾಯಿಸಿಕೊಳ್ಳಬಹುದಾಗಿದ್ದು, ಈ ಯೋಜನೆಯು ವಲಸೆ ಕಾರ್ಮಿಕರನ್ನು ಪತ್ತೆಹಚ್ಚಲು ಮತ್ತು ಅವರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುತ್ತದೆ.
ಫಲಾನುಭವಿಗಳ ವಯಸ್ಸು 18 ರಿಂದ 59 ವರ್ಷದವರಾಗಿದ್ದು, ಆದಾಯ ತೆರಿಗೆ ಪಾವತಿಸುವವರಾಗಿರಬಾರದು. ಫಲಾನುಭವಿಗಳು ಕಾರ್ಮಿಕರ ಭವಿಷ್ಯ ನಿಧಿ ಮತ್ತು ಕಾರ್ಮಿಕ ರಾಜ್ಯ ವಿಮೆ ಕಚೇರಿಗಳಲ್ಲಿ ಸದಸ್ಯರಾಗಿರಬಾರದು ಹಾಗೂ ಅಸಂಘಟಿತ ಕಾರ್ಮಿಕ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ನೋಂದಣಿ ಮಾಡಿಸಲು ಅರ್ಹರಾಗಿರುತ್ತಾರೆ.
ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಸಂಖ್ಯೆ, ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರ್ಹ ಅಸಂಘಟಿತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.