ಚಿಕ್ಕಬಳ್ಳಾಪುರ: ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಇ-ಶ್ರಮ್ ಯೋಜನೆಯು ಅತಿ ಪ್ರಮುಖವಾಗಿದ್ದು, ಈ ಯೋಜನೆಯಡಿ ಜಿಲ್ಲೆಯಲ್ಲಿರುವ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಹೆಚ್. ಅಮರೇಶ್ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇ-ಶ್ರಮ್ ಯೋಜನೆಯ ಅನುಷ್ಠಾನದ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ವರೆಗೆ 71 ಸಾವಿರ ಅಸಂಘಟಿತ ಕಾರ್ಮಿಕರು ನೊಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ ಜಿಲ್ಲೆಯಲ್ಲಿರುವ ಸುಮಾರು 5 ಲಕ್ಷ ಅಸಂಘಟಿತ ಕಾರ್ಮಿಕರನ್ನು ನೊಂದಾಯಿಸಬೇಕಾಗಿದೆ ಎಂದರು.
ಅನುಕೂಲಗಳೇನು?
ಇ-ಶ್ರಮ್ ಯೋಜನೆ ಅಡಿಯಲ್ಲಿ ನೊಂದಣಿ ಮಾಡಿಸಿಕೊಂಡರೆ ಕಾರ್ಮಿಕರು ಒಂದು ವರ್ಷಕ್ಕೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ, ಆಕಸ್ಮಿಕ ಸಾವು ಅಥವಾ ಪೂರ್ಣ ಅಂಗವೈಕಲ್ಯತೆಗೆ 2 ಲಕ್ಷ ರೂ. ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ. ಪರಿಹಾರ ಪಡೆಯಬಹುದಾಗಿದೆ. ಜೊತೆಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಮತ್ತು ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದಲ್ಲದೇ ವಲಸೆ ಕಾರ್ಮಿಕರ ಉದ್ಯೋಗಾವಕಾಶಕ್ಕೂ ಸಹಾಯಕವಾಗಲಿದೆ.
ಅಸಂಘಟಿತ ಕಾರ್ಮಿಕರು ನೊಂದಣಿಯಾಗಿದ್ದರೆ ಸರ್ಕಾರದ ಎಲ್ಲಾ ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯಗಳನ್ನು dbt ಮುಖಾಂತರ ನೇರವಾಗಿ ಪಡೆಯಬಹುದು ಹಾಗೂ ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸದೆ ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳ ವಿವಿಧ ಪ್ರಯೋಜನ ಪಡೆಯಬಹುದು. ಉಚಿತ ಆರೋಗ್ಯ ಸೇವೆ, ಕಾರ್ಮಿಕ ಕಲ್ಯಾಣ ನಿಧಿಯಿಂದ ಹಣಕಾಸಿನ ನೆರವು, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಾಲ ಸೌಲಭ್ಯ, ವಿವಾಹ ಸಹಾಯ ಧನ, ಪಿಂಚಣಿ ಸೌಲಭ್ಯಗಳನ್ನು ಸಹ ಪಡೆಯಬಹುದಾಗಿದೆ ಈ ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ನೋಂದಣಿ ಹೇಗೆ?
16 ರಿಂದ 59 ವರ್ಷದೊಳಗಿನ ವಯೋಮಾನದ ಅಸಂಘಟಿತ ಕಾರ್ಮಿಕರು ಆಧಾರ್ ಕಾರ್ಡ್, ಸಕ್ರಿಯ ಬ್ಯಾಂಕ್ ಖಾತೆ ಪಾಸ್ ಬುಕ್ ಮತ್ತು ಸಕ್ರಿಯ ದೂರವಾಣಿ ಸಂಖ್ಯೆಯ ವಿವರಗಳನ್ನು ಇ-ಶ್ರಮ್ ಪೋರ್ಟಲ್ ನಲ್ಲಿ (e-SHRAM) ನಮೂದಿಸುವ ಮೂಲಕ ನೇರವಾಗಿ ತಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ ನೋಂದಣಿ ಮಾಡಿಕೊಳ್ಳಬಹುದು. ಇಲ್ಲವೆ ತಮಗೆ ಸಮೀಪವಿರುವ ಸಾಮಾನ್ಯ ಸೇವಾ ಕೇಂದ್ರ(ಸಿ.ಎಸ್.ಸಿ) ಗಳಿಗೆ ಅಗತ್ಯ ದಾಖಲೆಗಳೊಂದಿಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ನೊಂದಣಿಗೆ ಯಾವುದೇ ರೀತಿಯ ತೊಡಕುಂಟಾದಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದ ಕಾರ್ಮಿಕ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಮತ್ತು ಸಹಾಯ ಪಡೆದು ನೊಂದಣಿ ಮಾಡಿಕೊಳ್ಳಬಹುದು ಎಂದರು.
ಸಂಪೂರ್ಣ ಉಚಿತ
ಗ್ರಾಮ ಪಂಚಾಯ್ತಿ ಮಟ್ಟದಿಂದ ಜಿಲ್ಲಾ ಕೇಂದ್ರದವರೆಗೆ ಜಿಲ್ಲೆಯಾದ್ಯಂತ 170 ಸಾಮಾನ್ಯ ಸೇವಾ ಕೇಂದ್ರಗಳಿವೆ. ಸಾರ್ವಜನಿಕರು ತಮ್ಮ ಸಮೀಪದ ಕೇಂದ್ರಗಳಿಗೆ ತೆರಳಿ ನೋಂದಾಯಿಸಿಕೊಳ್ಳಬಹುದಾಗಿದೆ . ಅರ್ಜಿಯನ್ನು ನೊಂದಣಿ ಮಾಡಲು ಹಾಗೂ ನೊಂದಣಿಯಾದ ಪ್ರತಿಯನ್ನು ಪಡೆಯಲು ಪ್ರತಿ ನೋಂದಣಿಗೆ 20 ರೂ.ಗಳನ್ನು ಸಂಬಂಧಿತ ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ) ಗಳಿಗೆ ಕೇಂದ್ರ ಸರ್ಕಾರವೇ ಭರಿಸುತ್ತದೆ. ನೋಂದಣಿ ಅಥವಾ ನೊಂದಣಿ ಪ್ರತಿಯನ್ನು ಪಡೆಯುವುದು ಸಂಪೂರ್ಣ ಉಚಿತವಾಗಿರುತ್ತದೆ. ನೊಂದಣಿ ಮಾಡಲು ಹಣದ ಬೇಡಿಕೆ ಇಡುವ ಸಾಮಾನ್ಯ ಸೇವಾ ಕೇಂದ್ರಗಳನ್ನು ಕೂಡಲೇ ಅಮಾನತ್ತು ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲೆಯಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಶೀಘ್ರ ನೋಂದಣಿ ಮುಗಿಸಿ:
ಜಿಲ್ಲೆಯಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತೀ ಸಣ್ಣ ರೈತರು, ಮೀನುಗಾರರು, ಪಶು ಸಂಗೋಪನಗಾರರು, ನೇಕಾರರು, ಬಡಗಿ ಕೆಲಸಗಾರರು, ಆಶಾ ಕಾರ್ಯಕರ್ತರು, ಫೋಟೋಗ್ರಾಫರ್ಸ್, ಕ್ಷೌರಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಮನೆಕೆಲಸಗಾರರು, ಪತ್ರಿಕೆ ಮಾರಾಟಗಾರರು, ಚಾಲಕರು, ಕೂಲಿ ಕಾರ್ಮಿಕರು (ನರೆಗಾ) ಬೀದಿ ವ್ಯಾಪಾರಿಗಳು, ಅಂಗಡಿ ವ್ಯಾಪಾರಸ್ಥರು, ಚರ್ಮ ಕೈಗಾರಿಕಾ ಕಾರ್ಮಿಕರು, ಆನ್ ಲೈನ್ ಸೇವಾ ಕಾರ್ಮಿಕರು, ಟೈಲರ್ ಗಳು, ಹೊಟೇಲ್ ಕಾರ್ಮಿಕರು, ಬೇಕರಿ ವ್ಯಾಪಾರಸ್ಥರು, ವಲಸೆ ಕಾರ್ಮಿಕರು, ಮತ್ತು ಮೆಕಾನಿಕ್ ಹಾಗೂ ಇನ್ನಿತರ ಅಸಂಘಟಿತ ಕಾರ್ಮಿಕರನ್ನು ನೋಂದಣಿ ಮಾಡಿಸುವ ಕಾರ್ಯವನ್ನು ಇಲಾಖಾವಾರು ಕಾರ್ಯ ಹಂಚಿಕೆ ಮಾಡಲಾಗಿದೆ ಅದರಂತೆ ಅತೀ ಶೀಘ್ರದಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಅಂಘಟಿತ ಕಾರ್ಮಿಕರನ್ನು ಇ-ಶ್ರಮ್ ಪೋರ್ಟಲ್(eshram.gov.in) ನಲ್ಲಿ ನೊಂದಾಯಿಸುವ ಮೂಲಕ ಈ ಯೋಜನೆಯ ವ್ಯಾಪ್ತಿಗೆ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಒಳಪಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕಾರ್ಮಿಕಾಧಿಕಾರಿ ವರಲಕ್ಷ್ಮೀ, ವಿವಿಧ ಅಸಂಘಟಿತ ಕಾರ್ಮಿಕರ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಸುನಿಲ್, ಮೋಹನ್, ಪ್ರಕಾಶ್, ಛಲಪತಿ, ದೇವರಾಜ್, ರಾಘವೇಂದ್ರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.