100-200 ರೂಪಾಯಿಗಳಿಗೆ ಕೊಲೆ ನಡೆಯುವ ಕಾಲ ಇದು. ಇಂಥಾ ಕಾಲದಲ್ಲಿ ಲಕ್ಷಾಂತರ ರೂಪಾಯಿ ಕೈಗೆ ಸಿಕ್ಕರೂ ಮರಳಿ ಕೊಡುವವರು ಯಾರಾದರೂ ಇರ್ತಾರಾ ? ಚಾನ್ಸೇ ಇಲ್ಲ ಅಂತ ಹೇಳೋದಕ್ಕೆನೇ ಹೋಗ್ಬೇಡಿ. ಅಂಥವರೂ ನಮ್ಮ ನಿಮ್ಮ ನಡುವೆ ಇದ್ದಾರೆ. ಆಗಾಗ ಅವರ ಸುದ್ದಿಗಳು ಮಾಧ್ಯಮದಲ್ಲಿ ಕೇಳಿ ಬರ್ತಾನೆ ಇವೆ.
ಇತ್ತೀಚೆಗೆ ಗಾಜಿಯಾಬಾದ್‌ನಲ್ಲಿ ಇ- ರಿಕ್ಷಾ ಚಾಲಕರೊಬ್ಬರಿಗೆ 25 ಲಕ್ಷ ರೂಪಾಯಿ ಇರುವ ಬ್ಯಾಗೊಂದು ಸಿಕ್ಕಿದ್ದು. ಅವರು ಅದನ್ನ ನೇರವಾಗಿ ಪೊಲೀಸರಿಗೆ ತಂದು ಕೊಟ್ಟಿದ್ದಾರೆ. ಅವರು ಮಾಡಿರುವ ಈ ಕೆಲಸ ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ, ಜೊತೆಗೆ ಮೆಚ್ಚುಗೆಯನ್ನ ಕೂಡ ಸೂಚಿಸಿದ್ದಾರೆ.
ಇ-ರಿಕ್ಷಾ ಚಾಲಕ ಆಸ್ ಮೊಹಮ್ಮದ್ ಬೆಳಿಗ್ಗೆ 10 ಗಂಟೆ ಸುಮಾರಿಗೆ, ಮೋದಿ ನಗರ ಪೊಲೀಸ್ ಠಾಣೆಯ ಬಡಾವಣೆಯ ಬಳಿ ಹೋಗುತ್ತಿದ್ದಾಗ, ಅವರಿಗೆ ರಸ್ತೆ ಪಕ್ಕದಲ್ಲಿ ಬಿದ್ದಿರುವ ಬ್ಯಾಗ್ ಒಂದು ಸಿಕ್ಕಿದೆ. ಆ ಚೀಲ ಪರೀಕ್ಷಿಸಿದಾಗ ಅದು ಗರಿ-ಗರಿ ನೋಟಿನಿಂದ ತುಂಬಿತ್ತು. ತಕ್ಷಣವೇ ಆಸ್ ಮೊಹಮ್ಮದ್ ತಮ್ಮ ಸೋದರಳಿಯನನ್ನ ಕರೆದು, ಅವರಿಬ್ಬರೂ ಸೇರಿ ಹತ್ತಿರದ ಮೋದಿನಗರ ಪೊಲೀಸ್ ಸ್ಟೆಷನ್‌ಗೆ ಆ 25 ಲಕ್ಷ ರೂಪಾಯಿ ಹಣದ ಚೀಲವನ್ನ ಕೊಟ್ಟಿದ್ದಾರೆ.
ಆಸ್ ಮೊಹಮ್ಮದ್ ಇ-ರಿಕ್ಷಾ ಚಾಲಕ. ಆತನಿಗೂ ಹಣದ ಅವಶ್ಯಕತೆ ಇರುತ್ತೆ. ಆತ ಮನಸ್ಸು ಮಾಡಿದರೆ, ಆ ಹಣದ ಚೀಲವನ್ನ ಮನೆಗೆ ತೆಗೆದುಕೊಂಡು ಹೋಗಬಹುದಿತ್ತು. ಆದರೆ ಆತ ಹಾಗೆ ಮಾಡದೇ ಪ್ರಾಮಾಣಿಕತನದಿಂದ, ಆ ಚೀಲದಲ್ಲಿರುವ ಹಣವನ್ನ ಎಣಿಸದೇ ಪೊಲೀಸರಿಗೆ ತಂದು ಕೊಟ್ಟಿದ್ದಾರೆ. ಆತನ ಈ ಪ್ರಾಮಾಣಿಕತನ ಸಮಾಜಕ್ಕೆ ಮಾದರಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಆ ನಂತರ ಆಸ್ ಮೊಹಮ್ಮದ್ ಅವರಿಗೆ ಇದೇ ಪೊಲೀಸ್ ಸ್ಟೆಷನ್‌ನಲ್ಲಿ ಸನ್ಮಾನ ಮಾಡಲಾಗಿದೆ.