ಲಕ್ನೋದಲ್ಲಿ ಇ-ರಿಕ್ಷಾ ಚಾಲಕನೊಬ್ಬ ತನ್ನ ತಾಯಿ ಮತ್ತು ಆಕೆಯ ಸಂಗಾತಿಯನ್ನು ಕೊಲ್ಲಲು ಸುಪಾರಿ ನೀಡಿದ ನಂತರ ಆತನನ್ನೇ ಹತ್ಯೆ ಮಾಡಲಾಗಿದೆ. 23 ವರ್ಷದ ವಿನಾಯಕ ಸಾಹು ಎಂಬಾತ ತನ್ನ ತಾಯಿ ಶಾಂತಿ ಸಾಹು ಮತ್ತು ಆಕೆಯ ಸಂಗಾತಿ ಇಮ್ರಾನ್ ಅವರನ್ನು ಕೊಲ್ಲಲು ಸುಪಾರಿ ನೀಡಿದ್ದ. ಆದರೆ, ಸುಪಾರಿ ಪಡೆದವರೇ ವಿನಾಯಕನನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನಾಯಕ 2.5 ಲಕ್ಷ ರೂಪಾಯಿ ಮತ್ತು ತನ್ನ ಇ-ರಿಕ್ಷಾವನ್ನು ಸುಪಾರಿ ಪಡೆದವರಿಗೆ ಪಾವತಿಯಾಗಿ ನೀಡಲು ಭರವಸೆ ನೀಡಿದ್ದ. ಆದರೆ, 1.5 ಲಕ್ಷ ರೂಪಾಯಿ ಮುಂಗಡ ಹಣ ನೀಡಲು ನಿರಾಕರಿಸಿದಾಗ ಅವರ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ವಿನಾಯಕನ ದೇಹವನ್ನು ಗಂಟಲು ಸೀಳಿದ ಸ್ಥಿತಿಯಲ್ಲಿ ಪತ್ತೆ ಮಾಡಲಾಗಿದೆ. ಪಿಜಿಐ ಪೊಲೀಸ್ ಠಾಣಾ ವ್ಯಾಪ್ತಿಯ ಡಲುನಾ ಗ್ರಾಮದ ಬಳಿ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಶಿವಂ ರಾವತ್ ಪತ್ತೆಯಾಗಿದ್ದಾನೆ. ಸ್ಥಳದಲ್ಲಿ ಚಾಕು ಮತ್ತು ಮದ್ಯದ ಬಾಟಲಿಗಳು ಸಹ ಪತ್ತೆಯಾಗಿವೆ. “ಶಿವಂ ರಾವತ್, 20; ಆಶಿಶ್, 21; ಅಮೀರ್ ಆಲಂ, 22 ಮತ್ತು ಶಿವ, 20 ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಅವರೆಲ್ಲರೂ ಮೋಹನ್‌ಲಾಲ್‌ಗಂಜ್‌ನಲ್ಲಿ ವಾಸಿಸುತ್ತಿದ್ದಾರೆ” ಎಂದು ಡಿಸಿಪಿ ಹೇಳಿದ್ದಾರೆ.
ವಿನಾಯಕ ಮತ್ತು ಆತನ ತಂದೆ ಅಂಜನಿ ಸಾಹು ಅವರು 10 ದಿನಗಳ ಹಿಂದೆ ತಮ್ಮ ಪತ್ನಿ ಶಾಂತಿ ಸಾಹು ಮತ್ತು ಆಕೆಯ ಸಂಗಾತಿ ಇಮ್ರಾನ್ ಅವರನ್ನು ಕೊಲ್ಲಲು ಕೆಲವು ಜನರನ್ನು ನೇಮಿಸಿಕೊಳ್ಳುವ ಬಗ್ಗೆ ಮಾತನಾಡಿದ್ದರು ಎಂದು ತಿಳಿದುಬಂದಿದೆ. ಶಾಂತಿ ಅವರು ಇಮ್ರಾನ್ ಜೊತೆ ವಾಸಿಸಲು ಅಂಜನಿಯನ್ನು ತೊರೆದಿದ್ದರಿಂದ ಅವರು ಕೋಪಗೊಂಡಿದ್ದರು. “ಘಟನೆ ನಡೆದ ರಾತ್ರಿ, ವಿನಾಯಕ ಆರೋಪಿಗಳಿಗೆ 1.50 ಲಕ್ಷ ರೂಪಾಯಿ ಮುಂಗಡ ಹಣ ನೀಡಲು ನಿರಾಕರಿಸಿದ. ಇದರಿಂದ ಅವರ ನಡುವೆ ಜಗಳ ನಡೆಯಿತು. ಅಲ್ಲದೆ, ಆರೋಪಿಗಳು ಮದ್ಯದ ಅಮಲಿನಲ್ಲಿದ್ದಾಗ ವಿನಾಯಕ ಸಾಹು ಅವರ ಕತ್ತಿಗೆ ಚಾಕುವಿನಿಂದ ಇರಿದಿದ್ದಾರೆ” ಎಂದು ಲಕ್ನೋ ಪೊಲೀಸರು ತಿಳಿಸಿದ್ದಾರೆ. ಶಿವಂ ರಾವತ್ ಹೊರತುಪಡಿಸಿ ಉಳಿದವರೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ.
ಮೃತನ ತಂದೆ ಅಂಜನಿ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ ಮತ್ತು ಜೈಲಿಗೂ ಹೋಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. “ತಮ್ಮ ಮಗನ ಸಾವಿನ ನಂತರ, ಅವರು ಸ್ವತಃ ಪೊಲೀಸರಿಗೆ ದೂರು ನೀಡಿದ್ದಾರೆ. ನಾಲ್ವರು ಆರೋಪಿಗಳು ಅಂಜನಿಯ ಹೆಸರನ್ನು ಹೇಳಿದ್ದಾರೆ, ನಾವು ಅವರ ಪಾತ್ರವನ್ನು ಇನ್ನೂ ತನಿಖೆ ಮಾಡುತ್ತಿದ್ದೇವೆ” ಎಂದು ಡಿಸಿಪಿ ಎಚ್‌ಟಿ ಗೆ ತಿಳಿಸಿದ್ದಾರೆ. ಅಪರಾಧ ನಡೆದ ಸ್ಥಳದಲ್ಲಿ ರಕ್ತಸಿಕ್ತ ಚಾಕು ಮತ್ತು ಟವೆಲ್ ಮತ್ತು ಮದ್ಯದ ಒಡೆದ ಬಾಟಲಿ ಪತ್ತೆಯಾಗಿದೆ ಎಂದು ಡಿಸಿಪಿ ಹೇಳಿದ್ದಾರೆ. ಕೊಲೆ ಪ್ರಕರಣ ದಾಖಲಿಸಿದ ನಂತರ, ಒಮ್ಯಾಕ್ಸ್ ಮೆಟ್ರೋ ಸಿಟಿ ಅಂಡರ್ ಪಾಸ್ (ಕಿಸಾನ್ ಪಥ್) ಬಳಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.