ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿಗೆ ಇ- ಅಸ್ತಿ ತಂತ್ರಾಂಶದಿಂದ ಪಡೆದ ಇ- ಖಾತಾ ಕಡ್ಡಾಯಗೊಳಿಸಲಾಗಿದೆ.
ಸೆಪ್ಟೆಂಬರ್ 9 ರಿಂದ ಚಾಮರಾಜನಗರ, ಬಾಗಲಕೋಟೆ, ರಾಯಚೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಜಾರಿ ಆಗಲಿದೆ. ಈ ಜಿಲ್ಲೆಗಳ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ವ್ಯಾಪ್ತಿಯ ಆಸ್ತಿಗಳಿಗೆ ಇ- ಆಸ್ತಿ ತಂತ್ರಾಂಶದಿಂದ ಇ-ಖಾತಾ ವಿತರಿಸಲಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ -2 ತಂತ್ರಾಂಶದೊಂದಿಗೆ ಇ- ಆಸ್ತಿ ಸಾಫ್ಟ್ವೇರ್ ಸಂಯೋಜಿಸಲಾಗಿದ್ದು, ತಂತ್ರಾಂಶದಿಂದ ಮಾಹಿತಿ ಪಡೆದು ದಸ್ತಾವೇಜು ನೋಂದಣಿ ಮಾಡುವಂತೆ ಕಂದಾಯ ಇಲಾಖೆ ವತಿಯಿಂದ ಸಬ್ ರಿಜಿಸ್ಟ್ರಾರ್ ಗಳಿಗೆ ಸೂಚನೆ ನೀಡಲಾಗಿದೆ.
ಸೆಪ್ಟಂಬರ್ 13 ರಿಂದ ಬಿಡಿಎ ಆಸ್ತಿಗಳಿಗೂ ಇದು ಅನ್ವಯವಾಗಲಿದ್ದು, ತಿಂಗಳಾಂತ್ಯಕ್ಕೆ ರಾಜ್ಯವ್ಯಾಪಿ ಜಾರಿಯಾಗಲಿದೆ. ಆದೇಶ ಉಲ್ಲಂಘಿಸಿದಲ್ಲಿ ಅಧಿಕಾರಿಗಳು, ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.