ಚೆನ್ನೈ: ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೊಡೈಕೆನಾಲ್ ಮತ್ತು ಊಟಿ ಗಿರಿಧಾಮಕ್ಕೆ ತೆರಳಲು ಇ- ಪಾಸ್ ಕಡ್ಡಾಯಗೊಳಿಸಬೇಕೆಂದು ಮದ್ರಾಸ್ ಸೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಮೇ 7 ರಿಂದ ಜೂ. 30ರ ಅವಧಿಗೆ ಈ ಆದೇಶ ಸೀಮಿತವಾಗಿರುತ್ತದೆ. ಇ- ಈ ಪಾಸ್ ಕುರಿತು ನಿಯಮಾವಳಿ ರೂಪಿಸಿ ತಮಿಳುನಾಡು ಸರ್ಕಾರ ರಾಷ್ಟ್ರಮಟ್ಟದಲ್ಲಿ ಜಾಹೀರಾತು ನೀಡುವ ಮೂಲಕ ಪ್ರಚುರಪಡಿಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಇ-ಪಾಸ್ ಇಲ್ಲದ ವಾಹನಗಳಿಗೆ ಗಿರಿಧಾಮಗಳಿಗೆ ಭೇಟಿಗೆ ಅವಕಾಶ ನೀಡಬಾರದು, ಪಾಸ್ ವಿತರಣೆಗೆ ಯಾವುದೇ ನಿಯಂತ್ರಣ ಹೇಳಲು ಸ್ಥಳೀಯರಿಗೆ ಇ- ಪಾಸ್ ಅನ್ವಯಿಸದು ಎಂದು ಹೈಕೋರ್ಟ್ ತಿಳಿಸಿದೆ.
ಇದಕ್ಕಾಗಿ ಮಾರ್ಗಸೂಚಿ ರೂಪಿಸಬೇಕು. ಜಿಲ್ಲಾಡಳಿತ ಮೂಲಕ ಜಾರಿಗೊಳಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ಊಟಿಗೆ ಪ್ರತಿದಿನ ಸುಮಾರು 1300 ವಾಹನಗಳು ಬರುತ್ತವೆ. ಮೇ ನಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಗಿರಿಧಾಮದ ರಸ್ತೆಗಳಿಗೆ ವಾಹನಗಳ ಹೊರೆ ತಡೆಯುವ ಸಾಮರ್ಥ್ಯವಿಲ್ಲ. ಸ್ಥಳೀಯರ ಸಂಚಾರಕ್ಕೆ, ಕಾಡುಪ್ರಾಣಿಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಬೆಂಗಳೂರಿನ ಐಐಎಂ ಮತ್ತು ಮದ್ರಾಸ್ ಐಎಟಿ ಜಂಟಿ ಅಧ್ಯಯನ ತಂಡ ಮಾಹಿತಿ ನೀಡಿತ್ತು. ಈ ಹಿನ್ನಲೆಯಲ್ಲಿ ಮದ್ರಾಸ್ ಹೈಕೋರ್ಟ್ ಇ-ಪಾಸ್ ಕಡ್ಡಾಯಗೊಳಿಸಿದೆ.