ಬೆಂಗಳೂರು: ಇನ್ನು ಮುಂದೆ ಹೈಕೋರ್ಟ್ ನೋಟಿಸ್ ಮತ್ತು ಸಮನ್ಸ್ ಜಾರಿಯಾಗಲಿವೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ದೇಶದ ಇತರೆ ಹೈಕೋರ್ಟ್ ಗಳಿಗಿಂತ ಮುಂದಿರುವ ಕರ್ನಾಟಕ ಹೈಕೋರ್ಟ್ ಇನ್ನು ಮುಂದೆ ಇ-ಮೇಲ್ ನಲ್ಲಿ ನೋಟಿಸ್ ನೀಡಲಿದೆ.
ಕೊರೋನಾ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ಮಾದರಿಯಾಗಿದ್ದ ಕರ್ನಾಟಕ ಹೈಕೋರ್ಟ್ ಈಗ ನೋಟಿಸ್ ಮತ್ತು ಸಮನ್ಸ್ ಗಳನ್ನು ಇ-ಮೇಲ್ ಮೂಲಕ ಜಾರಿ ಮಾಡಲು ಮುಂದಾಗಿದೆ. ಈ ಕುರಿತಾಗಿ ಕರಡು ನಿಯಮ ಪ್ರಕಟಿಸಲಾಗಿದ್ದು, ಹೊಸ ನಿಯಮ ಜಾರಿಯಾದ ನಂತರ ಕೋರ್ಟ್ ಗಳಲ್ಲಿ ಸಮನ್ಸ್, ನೋಟಿಸ್ ಜಾರಿಯಾಗಿಲ್ಲ ಎಂದು ಕಾರಣ ನೀಡುವುದು ತಪ್ಪಿದಂತಾಗುತ್ತದೆ.
ಪ್ರಸ್ತುತ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರತಿವಾದಿಗಳಿಗೆ ನೋಟಿಸ್ ನೀಡಲಾಗುತ್ತಿದೆ. ಸಿವಿಲ್ ಪ್ರಕರಣಗಳಲ್ಲಿ ನೋಟಿಸ್ ಜಾರಿ ಕಡ್ಡಾಯವಲ್ಲ, ಆಸ್ತಿ ವಿಭಜನೆ ಪ್ರಕರಣಗಳಲ್ಲಿ ಲೀಗಲ್ ನೋಟಿಸ್ ಕಡ್ಡಾಯವಾಗಿದೆ. ಸಿವಿಲ್, ಕ್ರಿಮಿನಲ್, ಗ್ರಾಹಕ ವ್ಯಾಜ್ಯ, ಚೆಕ್ ಬೌನ್ಸ್ ಸೇರಿದಂತೆ ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ನ್ಯಾಯಾಲಯ ಪ್ರಾಥಮಿಕ ವಿಚಾರಣೆ ಹಂತದಲ್ಲಿ ಮೊದಲಿಗೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡುತ್ತದೆ. ಕೋರ್ಟ್ ಮೂಲಕ ಇಲ್ಲವೇ ವಕೀಲರು ರಿಜಿಸ್ಟರ್ ಅಂಚೆ ಮೂಲಕ ಅಥವಾ ಕೋರ್ಟ್ ಅನುಮತಿ ಪಡೆದು ವಕೀಲರು ನೀಡುತ್ತಾರೆ.
ಈ ಪ್ರಕ್ರಿಯೆಗೆ ತಿಂಗಳುಗಟ್ಟಲೆ ಬೇಕಾಗುತ್ತದೆ. ಕೆಲವರು ಅಂಚೆ ಮೂಲಕ ಬಂದ ನೋಟಿಸ್ ಸ್ವೀಕರಿಸುವುದಿಲ್ಲ. ಇವೆಲ್ಲ ಕಾರಣಗಳಿಂದ ಆಧುನಿಕ ತಂತ್ರಜ್ಞಾನ ಬಳಸಿ ಇ-ಮೇಲ್ ಮೂಲಕ ನೋಟಿಸ್ ಜಾರಿಗೊಳಿಸಿದರೆ ತಕ್ಷಣವೇ ಪ್ರತಿವಾದಿಗೆ ತಲುಪುತ್ತದೆ. ಈ ಬಗ್ಗೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಸಹಮತ ವ್ಯಕ್ತಪಡಿಸಿದ್ದು, ಇನ್ನೂ ನೋಟಿಸ್ ಶೀಘ್ರ ವಿಲೇವಾರಿಗೆ ಸಹಕಾರಿಯಾಗಲಿದೆ. ಈ ಕ್ರಮದಿಂದ ನೋಟಿಸ್ ರವಾನೆ ಸರಳವಾಗಲಿದ್ದು, ಸಮಯವೂ ಉಳಿತಾಯವಾಗುತ್ತದೆ.