ಬಳ್ಳಾರಿ: ಪಡಿತರ ಚೀಟಿದಾರರ ಇ-ಕೆವೈಸಿ ಕಾರ್ಯಕ್ರಮ ಪುನಾರಂಭವಾಗಿದ್ದು, ಆಧಾರ್ ದೃಢೀಕರಣ ಮಾಡಿಸದಿರುವ ಫಲಾನುಭವಿಗಳ ಪಡಿತರ ಹಂಚಿಕೆ ಸ್ಥಗಿತಗೊಳಿಸಲಾಗುವುದು.
ಜಿಲ್ಲೆಯ ಪಡಿತರ ಚೀಟಿದಾರರು ತಮ್ಮ ಬೆರಳಚ್ಚು ನೀಡಿ ಗುರುತು ಮರು ನೋಂದಣಿ ಮಾಡಿಸದೇ ಇರುವ ಎಲ್ಲಾ ಸದಸ್ಯರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಎಲ್ಲರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದ್ದಾರೆ.
ಆಹಾರ ಸುರಕ್ಷತೆ ಜಾರಿಗೊಳಿಸುವ ಉದ್ದೇಶದಿಂದ ಈಗಾಗಲೇ ನ್ಯಾಯಬೆಲೆ ಅಂಗಡಿ ಹಂತದಲ್ಲಿ ಆಧಾರ್ ದೃಢೀಕರಣ(ಇ-ಕೆವೈಸಿ)ಕ್ಕೆ ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದ್ದು, 2020 ರ ಫೆಬ್ರವರಿಯಿಂದ ತಾತ್ಕಾಲಿಕವಾಗಿ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಜು.1 ರಿಂದ ಸೆಪ್ಟೆಂಬರ್ ಮಾಹೆಯವರೆಗೆ ಪ್ರತಿ ತಿಂಗಳು 1 ರಿಂದ 10 ನೇ ತಾರೀಖಿನವರೆಗೆ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ತಮ್ಮ ಹೆಬ್ಬೆರಳಚ್ಚು ನೀಡಿ ಉಚಿತವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಆಧಾರ್ ದೃಢೀಕರಣ ಮಾಡಿಸದೇ ಇರುವ ಫಲಾನುಭವಿಗಳ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮಕೈಗೊಳ್ಳಲಾಗುವುದು. ಆಧಾರ್ ದೃಢೀಕರಣ ಮಾಡಿಸಿದರೆ ಮಾತ್ರ ಮುಂದಿನ ತಿಂಗಳಿನಿಂದ ಪಡಿತರ ವಿತರಿಸಲು ಕ್ರಮವಹಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.