ಮಡಿಕೇರಿ: ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಯನ್ನು ಆಯಾ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಸೆಪ್ಟೆಂಬರ್ 1 ರಿಂದ 15 ರವರೆಗೆ ಸಂಗ್ರಹಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರದಿಂದ ಸೆಪ್ಟೆಂಬರ್ 16 ರಿಂದ 30 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.
ಸೆಪ್ಟೆಂಬರ್ 16 ರಿಂದ 30 ರವರೆಗೆ ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪಡಿತರ ಆಹಾರ ಧಾನ್ಯ ವಿತರಣೆಯ ಜೊತೆಗೆ ಇ-ಕೆವೈಸಿ ಸಂಗ್ರಹಿಸಲು ಸರ್ಕಾರ ಅವಕಾಶವನ್ನು ಕಲ್ಪಿಸಿರುತ್ತದೆ. ಉಳಿಕೆ ಅವಧಿಯಲ್ಲಿ ಪಡಿತರ ವಿತರಣೆ ಕಾರ್ಯ ಮಾತ್ರ ನಡೆಯುತ್ತದೆ.
ಮುಂದಿನ ದಿನಗಳಲ್ಲಿ ಇ-ಕೆವೈಸಿ ಮಾಡಿಸದಂತಹ ಫಲಾನುಭವಿಗಳನ್ನು ಅನರ್ಹರೆಂದು ಪರಿಗಣಿಸಿ ಪಡಿತರವನ್ನು ಸ್ಥಗಿತಗೊಳಿಸುವ ಸಾಧ್ಯತೆ ಇರುವುದರಿಂದ ಸರ್ಕಾರ ನಿಗದಿಪಡಿಸಿದ ದಿನಾಂಕದೊಳಗೆ ಇ-ಕೆವೈಸಿ ಮಾಡಿಸದಂತಹ ಎಲ್ಲಾ ವರ್ಗದ ಪಡಿತರ ಚೀಟಿ ಫಲಾನುಭವಿಗಳು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಕೋರಿದ್ದಾರೆ.