ತಮಿಳುನಾಡಿನ ಹೊಸೂರು ಹೊರವಲಯದ ಜುಜುವಾಡಿಯಲ್ಲಿ ಎಲೆಕ್ಟ್ರಿಕ್ ಬೈಕ್ ಗೆ ಬೆಂಕಿ ತಗುಲಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ 29 ವರ್ಷದ ಸತೀಶ್ ಶನಿವಾರ ಬೆಳಗ್ಗೆ ಹೊಸೂರು ಬಳಿ ಬೆಂಕಿ ಹೊತ್ತಿಕೊಂಡ ಎಲೆಕ್ಟ್ರಿಕ್ ಸ್ಕೂಟರ್ ನಿಂದ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವರ್ಷದ ಹಿಂದೆ ಓಕಿನಾವಾ ತಯಾರಿಸಿದ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದ ಸತೀಶ್, ಜುಜುವಾಡಿಯಿಂದ ಉಪಕಾರ್ ಲೇಔಟ್‌ಗೆ ತೆರಳುತ್ತಿದ್ದ ವೇಳೆ ಸ್ಕೂಟರ್‌ಗೆ ಬೆಂಕಿ ತಗುಲಿದೆ. ತಕ್ಷಣ ವಾಹನದಿಂದ ಕೆಳಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. SIPCOT ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
i-Praise+ ಸ್ಕೂಟರ್ ಅನ್ನು ಭಾರತ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಓಕಿನಾವಾ ತಯಾರಿಸಿದೆ. ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ, ಸ್ಪೋಟದಂತಹ ಘಟನೆಗಳು ಮರುಕಳಿಸುತ್ತಿದ್ದು, ಆತಂಕ ತಂದಿದೆ. ಕಳೆದ ಕೆಲವು ವಾರಗಳಲ್ಲಿ ತಮಿಳುನಾಡಿನಾದ್ಯಂತ ಇ-ಬೈಕ್‌ಗಳಿಗೆ ಬೆಂಕಿ ತಗುಲಿದ ಹಲವಾರು ಘಟನೆಗಳು ವರದಿಯಾಗಿವೆ.