ಈ ಮೊದಲು ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಪೋಟಗೊಂಡ ಹಲವು ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಆ ನಂತರ ಇಂತಹ ಪ್ರಕರಣಗಳಿಗೆ ಕಡಿವಾಣ ಬಿದ್ದಿತ್ತು.
ಇದೀಗ ಗುಜರಾತಿನಲ್ಲಿ ನಡೆದಿರುವ ಘಟನೆಯೊಂದು ಆತಂಕಕ್ಕೆ ಕಾರಣವಾಗಿದೆ. ಬನಸ್ಕಾಂತ್ ಜಿಲ್ಲೆಯ ಮಹೇಶ್ ಭಾಯ್ ಎಂಬವರು 15 ತಿಂಗಳ ಹಿಂದೆ 80,000 ರೂ. ತೆತ್ತು ಖರೀದಿಸಿದ್ದ ಇ ಸ್ಕೂಟರ್ ಬ್ಯಾಟರಿ ಚಾರ್ಜ್ ಮಾಡುವಾಗ ಸ್ಪೋಟಗೊಂಡಿದೆ.
ಮಹೇಶ್ ಭಾಯ್ ಅವರ ಪುತ್ರಿ ಸ್ಕೂಟರ್ನಿಂದ ಬ್ಯಾಟರಿ ತೆಗೆದು ಮನೆಯ ಗ್ಯಾಲರಿಯಲ್ಲಿ ಚಾರ್ಜ್ ಮಾಡಲು ಹಾಕಿದ್ದರು. ಇದಾದ ಐದು ನಿಮಿಷದಲ್ಲೇ ಬ್ಯಾಟರಿ ಸ್ಪೋಟಗೊಂಡಿದ್ದು, ಅದೃಷ್ಟವಶಾತ್ ಅಷ್ಟರಲ್ಲಾಗಲೇ ಯುವತಿ ಅಲ್ಲಿಂದ ದೂರ ಹೋಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾಳೆ.
ಸ್ಫೋಟದ ಸದ್ದು ಕೇಳುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ಬೆಂಕಿಯನ್ನು ನಂದಿಸಿದ್ದಾರೆ. ಬ್ಯಾಟರಿ ಸ್ಪೋಟದ ಕುರಿತಂತೆ ಪ್ರತಿಕ್ರಿಯಿಸಿದ ಮಹೇಶ್ ಭಾಯ್, ನನ್ನ ಮಗಳು ಸ್ಕೂಟರ್ ಚಾಲನೆ ಮಾಡುವಾಗ ಅದು ಸ್ಪೋಟಗೊಂಡಿದ್ದರೆ ಗತಿಯೇನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.