ಶಿವಮೊಗ್ಗ: ಶಿವಮೊಗ್ಗ ಉಪ ವಿಭಾಗ -ಎ ಡಿವೈಎಸ್ಪಿ ಬಾಲರಾಜ್ ಅವರನ್ನು ಎಸ್ಐಟಿಗೆ ವರ್ಗಾವಣೆ ಮಾಡಲಾಗಿದೆ.
ಎಸ್ಐಟಿಯ ಬಿಟ್ ಕಾಯಿನ್ ಹಗರಣದ ತನಿಖೆಗೆ ಅವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು, ಈ ಮೂಲಕ ಬಿಟ್ ಕಾಯಿನ್ ಹಗರಣ ಪ್ರಕರಣ ಮರುಜೀವ ಪಡೆದುಕೊಂಡಿದೆ.
ಶಿವಮೊಗ್ಗ ವಿಭಾಗದ ಡಿವೈಎಸ್ಪಿಯಾಗಿ 2022ರ ಏಪ್ರಿಲ್ 21ರಂದು ಅಧಿಕಾರ ವಹಿಸಿಕೊಂಡಿದ್ದ ಬಾಲರಾಜ್ ವಿಶಿಷ್ಟ ಕಾರ್ಯಶೈಲಿಯ ಮೂಲಕ ಸವಾಲಿನ ಪ್ರಕರಣಗಳನ್ನು ಭೇದಿಸಿದ್ದಾರೆ. ತನಿಖೆಯ ಮೂಲಕ ನೀರಾವರಿ ಇಲಾಖೆ ಅಧಿಕಾರಿ ಪತ್ನಿ ಕೊಲೆ ಪ್ರಕರಣದಲ್ಲಿ ಕಾರ್ ಚಾಲಕನ ಕೈವಾಡ ಪತ್ತೆ ಹಚ್ಚಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ 2005ರಿಂದ 2008ರ ವರೆಗೆ ಕಾರ್ಯನಿರ್ವಹಿಸಿದ್ದ ಅವರು ಖಡಕ್ ಅಧಿಕಾರಿ ಎಂದೇ ಹೆಸರು ಪಡೆದಿದ್ದಾರೆ.
ಬಾಲರಾಜ್ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರವಲ್ಲದೇ, ಕಲಬುರಗಿ, ವಿಜಯಪುರ, ರಾಯಚೂರು, ಬೆಂಗಳೂರಿನಲ್ಲಿಯೂ ಕಾರ್ಯನಿರ್ವಹಿಸಿದ್ದು, ಇದೀಗ ಅವರನ್ನು ಬಿಟ್ ಕಾಯಿನ್ ಹಗರಣದ ತನಿಖೆಗೆ ಎಸ್ಐಟಿಗೆ ನಿಯೋಜನೆ ಮಾಡಲಾಗಿದೆ.