ಜನಪ್ರಿಯ ಹಾಸ್ಯನಟ ದರ್ಶನ್, ಅಪ್ರಾಪ್ತ ಬಾಲಕಿಯ ಅತ್ಯಾಚಾರದ ಆರೋಪದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಹರಿಯಾಣ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ADJ) ಸುನೀಲ್ ಜಿಂದಾಲ್ ಅವರ ನ್ಯಾಯಾಲಯ ಸೋಮವಾರ ಈ ತೀರ್ಪು ನೀಡಿದೆ.
ಹರಿಯಾಣ ಮೂಲದ ದರ್ಶನ್, ಮಾರ್ಚ್ 11 ರಂದು ತಪ್ಪಿತಸ್ಥರೆಂದು ಸಾಬೀತಾಗಿದ್ದು, ಅಂದಿನಿಂದ ಪೊಲೀಸ್ ವಶದಲ್ಲಿದ್ದಾರೆ. ಪೋಕ್ಸೊ ಕಾಯ್ದೆಯಡಿ 20 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ, ಸೆಕ್ಷನ್ 363 ರ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ, ಸೆಕ್ಷನ್ 343 ರ ಅಡಿಯಲ್ಲಿ ಒಂದು ವರ್ಷದ ಜೈಲು ಶಿಕ್ಷೆ ಮತ್ತು 1,000 ರೂಪಾಯಿ ದಂಡ ಮತ್ತು ಸೆಕ್ಷನ್ 506 ರ ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 1,000 ರೂಪಾಯಿ ದಂಡ ವಿಧಿಸಲಾಗಿದೆ. ಈ ಪ್ರಕರಣವು ಸೆಪ್ಟೆಂಬರ್ 2020 ಕ್ಕೆ ಸಂಬಂಧಿಸಿದೆ. ಆಗ್ರೋಹಾ ಪ್ರದೇಶದ ಗ್ರಾಮವೊಂದರ ಅಪ್ರಾಪ್ತ ಬಾಲಕಿಯ ತಾಯಿ ಪೊಲೀಸ್ ದೂರು ದಾಖಲಿಸಿದ್ದರು. ಯೂಟ್ಯೂಬ್‌ನಲ್ಲಿನ ಹಾಸ್ಯ ವೀಡಿಯೊಗಳಿಗೆ ಹೆಸರುವಾಸಿಯಾದ ದರ್ಶನ್, ತನ್ನ ವೀಡಿಯೊಗಳಲ್ಲಿ ಒಂದರಲ್ಲಿ ನಟಿಸುವ ನೆಪದಲ್ಲಿ ಬಾಲಕಿಗೆ ಆಮಿಷವೊಡ್ಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಲಿಪಶುವಿನ ವಕೀಲರಾದ ರೇಖಾ ಮಿತ್ತಲ್ ಅವರ ಪ್ರಕಾರ, ದರ್ಶನ್ ಸೆಪ್ಟೆಂಬರ್ 21, 2020 ರಂದು ಅಪ್ರಾಪ್ತೆಯನ್ನು ಸಂಪರ್ಕಿಸಿ ವೀಡಿಯೊ ಶೂಟ್‌ಗೆ ಬರುವಂತೆ ಕೇಳಿದ್ದರು. ವೀಡಿಯೊ ಶೂಟ್ ನಂತರ, ಚಂಡೀಗಢಕ್ಕೆ ಹೋಗುವಂತೆ ದರ್ಶನ್ ಕೇಳಿದ್ದು ನಿರಾಕರಿಸಿದಾಗ ಬೆದರಿಕೆ ಹಾಕಿದ್ದ. ನಂತರ ದರ್ಶನ್ ತನ್ನ ಸಹೋದರನೊಂದಿಗೆ ಬೈಕ್‌ನಲ್ಲಿ ಚಂಡೀಗಢಕ್ಕೆ ಕರೆದೊಯ್ದು, ಅಲ್ಲಿ ಹೋಟೆಲ್ ಕೋಣೆಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು.
ಅವಳು ವಯಸ್ಕಳೆಂದು ಬಿಂಬಿಸಲು ಅವರು ದಾಖಲೆಗಳನ್ನು ತಿರುಚಿದ್ದರಲ್ಲದೇ ಸಂಸ್ಥೆಯೊಂದರ ಸಹಾಯದಿಂದ ಬಲವಂತವಾಗಿ ಮದುವೆ ಮಾಡಿದ್ದರು. ಬಾಲಕಿ ನಂತರ ಮನೆಗೆ ಹಿಂದಿರುಗಿ ತಾಯಿಗೆ ತನ್ನ ಸಂಕಷ್ಟವನ್ನು ವಿವರಿಸಿದ ಬಳಿಕ ದರ್ಶನ್ ಬಂಧನವಾಗಿತ್ತು. ಆರಂಭದಲ್ಲಿ ಜಾಮೀನು ನೀಡಲಾಗಿದ್ದರೂ, ತಪ್ಪಿತಸ್ಥ ತೀರ್ಪಿನ ನಂತರ ಅವನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು.
ಜೈಲು ಶಿಕ್ಷೆ ಮತ್ತು ದಂಡದ ಜೊತೆಗೆ, ಬಲಿಪಶುವಿಗೆ 2,00,000 ರೂಪಾಯಿ ಪರಿಹಾರವನ್ನು ನೀಡುವಂತೆ ನ್ಯಾಯಾಲಯವು ದರ್ಶನ್‌ಗೆ ಆದೇಶಿಸಿದೆ.