ಬೆಂಗಳೂರು: ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದ ಅನ್ವಯ ಅರ್ಹ ದಿನಗೂಲಿ ನೌಕರರಿಗೆ 2024ರ ಪರಿಷ್ಕೃತ ವೇತನ ಶ್ರೇಣಿಗಳ ಅನ್ವಯ ಆರ್ಥಿಕ ಸೌಲಭ್ಯ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇದರೊಂದಿಗೆ ದಿನಗೂಲಿ ನೌಕರರಿಗೆ ಸರ್ಕಾರದಿಂದ ದಸರಾ ಗಿಫ್ಟ್ ದೊರೆತಿದೆ. ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರ ಅನ್ವಯ ಅಧಿಸೂಚಿಸಲ್ಪಟ್ಟ ಅರ್ಹ ದಿನಗೂಲಿ ನೌಕರರಿಗೆ 2024ರ ಅನ್ವಯ ಪರಿಷ್ಕೃತ ವೇತನ ಶ್ರೇಣಿಗಳ ಅನ್ವಯ ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡುವ ಬಗ್ಗೆ ವಿವಿಧ ಅಧಿಸೂಚನೆ, ಸುತ್ತೋಲೆಗಳನ್ನು ಉಲ್ಲೇಖಿಸಿ ಆದೇಶ ಹೊರಡಿಸಲಾಗಿದೆ.
ಅರ್ಹರಾದ ದಿನಗೂಲಿ ನೌಕರರಿಗೆ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುವ ಇತರೆ ಸೌಲಭ್ಯ ಕಲ್ಪಿಸಲು ತಿಳಿಸಲಾಗಿದೆ. ದಿನಗೂಲಿ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಗಳ ಅನ್ವಯ ಅವರನ್ನು ಮುಂದುವರೆಸಿದ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನವನ್ನು ನಿಗದಿಗೊಳಿಸಿ ಆದೇಶಿಸಲಾಗಿದೆ. ತುಟ್ಟಿ ಭತ್ಯೆಯನ್ನು ಶೇಕಡ 90ಕ್ಕೆ, ಮನೆ ಬಾಡಿಗೆ ಭತ್ಯೆಯಯನ್ನು ಶೇಕಡ 90ಕ್ಕೆ ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ರಾಜ್ಯವೇತನ ಆಯೋಗದ ಅನ್ವಯ ಪರಿಷ್ಕೃತ ವೇತನ ಶ್ರೇಣಿಗಳನ್ನು ಸರ್ಕಾರ ಮಂಜೂರು ಮಾಡಿದೆ. ಅದರ ಅನ್ವಯ ಅರ್ಹ ದಿನಗೂಲಿ ನೌಕರರ ಆರ್ಥಿಕ ಸೌಲಭ್ಯಗಳನ್ನು ಪರಿಷ್ಕರಿಸಿ ಮಂಜೂರು ಮಾಡಲು ಆದೇಶ ಹೊರಡಿಸಲಾಗಿದೆ.