ಯುಗಾದಿಯಲ್ಲಿ ಮನೆಯ ಗೋಡೆ ಚೆಂದ, ಮಳೆಗಾಲದಲ್ಲಿ ಭೂಮಿಯ ನೋಟ ಚೆಂದ ಎಂಬ ಮಾತಿದೆ. ಯುಗಾದಿಗೆ ಮನೆಗಳು ಸುಣ್ಣ, ಬಣ್ಣಗಳಿಂದ ಕಂಗೊಳಿಸಿದರೆ, ಮಳೆಗಾಲದಲ್ಲಿ ಹಚ್ಚ ಹಸುರಿನ ಪ್ರಕೃತಿಯ ಸೊಬಗು ಕಣ್ಮನ ಸೆಳೆಯುತ್ತದೆ.
ಬೇಸಿಗೆಯಲ್ಲಿ ಬತ್ತಿ ಹೋಗಿದ್ದ ಜಲಪಾತಗಳು ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುತ್ತವೆ. ಜಲಧಾರೆಯ ವೈಭವವನ್ನು ಕಣ್ತುಂಬಿಕೊಳ್ಳುವುದು ಮನಸಿಗೆ ಮುದ ನೀಡುತ್ತದೆ.
ಮಲೆನಾಡು ಘಟ್ಟ ಪ್ರದೇಶಗಳಲ್ಲಿ ಹಸಿರಿನ ನಡುವೆ ಹಾಲಿನ ನೊರೆಯಂತೆ ಉಕ್ಕುವ ನೀರನ್ನು ನೋಡಿದರೆ ಮೈಮನ ನವಿರೇಳುತ್ತದೆ.
ಜೋಗಫಾಲ್ಸ್, ಅಬ್ಬಿ ಫಾಲ್ಸ್, ಶಿವನ ಸಮುದ್ರ, ಶಿವಗಂಗಾ ಫಾಲ್ಸ್ ಮೊದಲಾದ ಪ್ರಮುಖ ಜಲಪಾತಗಳು ಮಾತ್ರವಲ್ಲ. ನೂರಾರು ಜಲಪಾತಗಳು ಮಳೆಗಾಲದಲ್ಲಿ ಸೃಷ್ಠಿಯಾಗುತ್ತವೆ.
ಘಾಟಿಯ ರಸ್ತೆಗಳಲ್ಲಿ ಸಾಗಿದರೆ, ದಾರಿಯುದ್ದಕ್ಕೂ ಬೆಟ್ಟಸಾಲುಗಳಲ್ಲಿ ಧುಮ್ಮಿಕ್ಕುವ ಜಲಪಾತಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಮಳೆಗಾಲದ ಪ್ರವಾಸ ಮನಸಿಗೆ ಮುದ ನೀಡುತ್ತದೆ. ನೀವೂ ಒಮ್ಮೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ