
ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆಗೆ ವಿಶೇಷ ಮಹತ್ವವಿದೆ. ಈ ಸಂವತ್ಸರದ ನವರಾತ್ರಿ ಇನ್ನೇನು ಬಂದೇಬಿಟ್ಟಿದೆ. ಕೊಲ್ಕೊತ್ತಾ ಸೇರಿ ದೇಶದೆಲ್ಲೆಡೆ ಸಂಭ್ರಮಾಚರಣೆಗೆ ತಯಾರಿ ನಡೆದಿದೆ.
ಪ್ರತಿ ವರ್ಷ ಕೋಲ್ಕತ್ತಾದ ದುರ್ಗಾ ಪೆಂಡಾಲ್‌ಗಳಲ್ಲಿ ಹೊಸತನವಿರುತ್ತದೆ. ಐತಿಹಾಸಿಕ ಮತ್ತು ಪ್ರಸ್ತುತ ನಡೆಯುವ ಬೆಳವಣಿಗೆಗಳು ಪೆಂಡಾಲ್‌ಗಳಲ್ಲಿ ಪ್ರಸ್ತುತಗೊಳ್ಳಲಿದೆ.
ಪ್ರತಿ ವರ್ಷ ತನ್ನ ಥೀಮ್‌ನೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುವ ಶ್ರೀ ಭೂಮಿ ಸ್ಪೋರ್ಟಿಂಗ್ ಕ್ಲಬ್, ಈ ವರ್ಷ ಪೂಜಾ ಮಂಟಪದ ಥೀಮ್ ಬಲು ವಿಶೇಷ ಎನಿಸಿದೆ. ಅದು ‘ವ್ಯಾಟಿಕನ್ ಸಿಟಿ’ಯ ಥೀಮ್‌ನಲ್ಲಿ ದುರ್ಗಾ ಮಂಟಪ ಸಿದ್ಧಪಡಿಸಿದೆ. ಕೋಲ್ಕತ್ತಾದಲ್ಲಿರುವ ಶ್ರೀ ಭೂಮಿ ಸ್ಪೋರ್ಟಿಂಗ್ ಕ್ಲಬ್‌ನ 50 ವರ್ಷಗಳ ಸುವರ್ಣ ಮಹೋತ್ಸವವನ್ನು ಸಹ ಆಚರಿಸುತ್ತಿದೆ.
ರೋಮ್‌ನಲ್ಲಿರುವ ವ್ಯಾಟಿಕನ್ ಸಿಟಿಯ ಬಗ್ಗೆ ಎಲ್ಲರೂ ಕೇಳಿದ್ದಾರೆ, ಆದರೆ ಕೆಲವು ಅದೃಷ್ಟವಂತರು ಮಾತ್ರ ವಿದೇಶ ಪ್ರವಾಸದ ಮೂಲಕ ಅದನ್ನು ನೋಡಲು ಸಾಧ್ಯವಾಗುತ್ತದೆ. ಹೀಗಾಗಿ ದುರ್ಗಾ ಮಂಟಪದಲ್ಲಿ ವ್ಯಾಟಿಕನ್ ಸಿಟಿಯ ಪ್ರತಿಕೃತಿ ನೋಡಬಹುದು ಎಂದು ಆಯೋಜಕ ಸಂಘಟನೆ ಅಧ್ಯಕ್ಷ ಹಾಗೂ ಸಚಿವ ಸುಜಿತ್ ಬೋಸ್ ಹೇಳಿದ್ದು, ವ್ಯಾಟಿಕನ್ ಸಿಟಿಗೆ ಭೇಟಿ ನೀಡುವ ಆಸೆ ಇರುವವರು ಈ ವರ್ಷ ನಮ್ಮ ಪೆಂಡಾಲ್‌ಗೆ ಭೇಟಿ ನೀಡಿದರೆ ಈಡೇರುತ್ತದೆ ಎಂದಿದ್ದಾರೆ.
ಈ ಪೆಂಡಾಲನ್ನು ತಯಾರಿಸಲು 60 ದಿನಗಳನ್ನು ತೆಗೆದುಕೊಂಡಿತು. 100ಕ್ಕೂ ಹೆಚ್ಚು ಕುಶಲಕರ್ಮಿಗಳು ಒಟ್ಟಾಗಿ ಇದನ್ನು ತಯಾರಿಸಿದ್ದಾರೆ. ಕಳೆದ ವರ್ಷ ನಾವು ಬುರ್ಜ್ ಖಲೀಫಾವನ್ನು ತಯಾರಿಸಿದ್ದೆವು ಎಂದು ಅವರು ತಿಳಿಸಿದ್ದಾರೆ.
