ನವವಿವಾಹಿತೆಯೊಬ್ಬಳು ತನ್ನ ಪತಿ ಹಾಗೂ ಅತ್ತೆಯ ಒಡವೆ, ನಗದು ಕದ್ದು ಪರಾರಿಯಾದ ಸಿನಿಮೀಯ ಘಟನೆಯೊಂದು ಉತ್ತರ ಪ್ರದೇಶದ ಮೈನ್ಪುರಿ ಎಂಬಲ್ಲಿ ನಡೆದಿದೆ. ತನ್ನ ಪತಿಯ ಜೊತೆಗೆ ತವರು ಮನೆಗೆ ತೆರಳುತ್ತಿದ್ದ ವೇಳೆ ನವವಿವಾಹಿತೆ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ರಾಜು ಎಂಬಾತ ಮಧ್ಯವರ್ತಿಯ ಸಹಾಯದಿಂದ ಈ ವಧುವಿನ ಜೊತೆಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದ. ರಾಜು ತಂದೆ ವಧುದಕ್ಷಿಣೆ ರೂಪದಲ್ಲಿ 80 ಸಾವಿರ ರೂಪಾಯಿಯನ್ನೂ ನೀಡಿದ್ದರು.
ಆಗಸ್ಟ್ 17ರಂದು ರಾಜು ವಿವಾಹ ನೆರವೇರಿತ್ತು. ವರನ ಕಡೆಯವರೇ ವಧುವಿನ ಉಡುಪು, ಆಭರಣ ಸೇರಿದಂತೆ ಸಾಕಷ್ಟು ಉಡುಗೊರೆಗಳನ್ನು ನೀಡಿದ್ದರು. ಬಸ್ ನಿಲ್ದಾಣಕ್ಕೆ ಬಂದಿದ್ದ ವೇಳೆ ಪತ್ನಿ, ರಾಜು ಬಳಿ ತನಗೆ ಬಾಯಾರಿಕೆಯಾಗುತ್ತಿದೆ ಹೀಗಾಗಿ ನೀರಿನ ಬಾಟಲಿ ತಂದುಕೊಡುವಂತೆ ಹೇಳಿದ್ದಳು ಎನ್ನಲಾಗಿದೆ.
ರಾಜು ನೀರಿನ ಬಾಟಲಿಯ ಜೊತೆಗೆ ವಾಪಸ್ಸಾದ ವೇಳೆ ಆತನಿಗೆ ಶಾಕ್ ಕಾದಿತ್ತು. ಏಕೆಂದರೆ ಆಕೆ ಎಲ್ಲಾ ಸಾಮಾನು ಸಮೇತ ಸ್ಥಳದಿಂದ ಕಣ್ಮರೆಯಾಗಿದ್ದಳು. ಈ ಸಂಬಂಧ ರಾಜು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.