ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆ ಒಂದರಲ್ಲಿ ಗಂಟೆಗಳ ಕಾಲ ಕರೆಂಟ್ ಕೈಕೊಟ್ಟ ಕಾರಣ ವೈದ್ಯರೊಬ್ಬರು ಮಹಿಳಾ ರೋಗಿಗೆ ಟಾರ್ಚ್ ಬೆಳಕಿನಲ್ಲಿಯೇ ತಪಾಸಣೆ ನಡೆಸಿ ಚಿಕಿತ್ಸೆ ನೀಡಿರುವ ಘಟನೆ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಲಿಯಾದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ರೋಗಿಯನ್ನು ಸ್ಟ್ರೆಚರ್ ಮೇಲೆ ಮಲಗಿಸಿ ವೈದ್ಯರು ತಪಾಸಣೆ ನಡೆಸಿ ಚಿಕಿತ್ಸೆ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಜಿಲ್ಲಾಸ್ಪತ್ರೆಯಲ್ಲಿಯೇ ಜನರೇಟರ್ ಇಲ್ಲದಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ.
ಆದರೆ ಈ ಕುರಿತಂತೆ ಆಸ್ಪತ್ರೆಯ ಉಸ್ತುವಾರಿ ಮುಖ್ಯಸ್ಥ ಡಾ. ಆರ್.ಡಿ. ರಾಮ್ ಸ್ಪಷ್ಟನೆ ನೀಡಿದ್ದು, ಆಸ್ಪತ್ರೆಯಲ್ಲಿ ಜನರೇಟರ್ ಇದೆ. ಆದರೆ ಅದಕ್ಕೆ ಬ್ಯಾಟರಿ ಹಾಕಿರಲಿಲ್ಲವಾದ ಕಾರಣ ಸಕಾಲಕ್ಕೆ ಸ್ಟಾರ್ಟ್ ಮಾಡಲು ಆಗಿಲ್ಲ ಎಂದು ತಿಳಿಸಿದ್ದಾರೆ.
ಆದರೆ ಮಾಧ್ಯಮ ಪ್ರತಿನಿಧಿಗಳು ಬ್ಯಾಟರಿಯನ್ನು ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದಾಗ, ಬ್ಯಾಟರಿ ಕಳುವಾದರೆ ಕಷ್ಟ ಎಂಬ ಕಾರಣಕ್ಕೆ ಅದನ್ನು ತೆಗೆದು ಇರಿಸಿದ್ದೇವೆ ಎಂಬ ಅಸಮರ್ಪಕ ಉತ್ತರ ನೀಡಿದ್ದಾರೆ.