ಕಟ್ಟಡ ನಿರ್ಮಾಣದ ವಿಷಯಗಳಲ್ಲಿ ಹಲವು ಪ್ರಥಮಗಳಿಗೆ ಹೆಸರಾಗಿರುವ ದುಬೈ ಈಗ ಇನ್ನೊಂದು ದಾಖಲೆ ಬರೆಯಲು ಸಿದ್ಧವಾಗಿದೆ. ಜಗತ್ತಿನ ಅತಿ ಎತ್ತರದ ಮತ್ತೊಂದು ಹೋಟೆಲ್ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷದ ಅಂತ್ಯದ ವೇಳೆಗೆ ಇದು ಕಾರ್ಯಾರಂಭ ಮಾಡಲಿದೆ ಎಂದು ಹೇಳಲಾಗಿದೆ.
ದುಬೈ ಮರಿನಾದಲ್ಲಿರುವ Ciel ಈ ಹೋಟೆಲ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಇದು 365 ಮೀಟರ್ ಎತ್ತರವಿರಲಿದೆ ಎಂದು ಹೇಳಲಾಗಿದೆ. ಲಂಡನ್ ಮೂಲದ ಪ್ರಶಸ್ತಿ ವಿಜೇತ ಆರ್ಕಿಟೆಕ್ಟ್ ಸಂಸ್ಥೆ NORR ಈ ಕಟ್ಟಡದ ಡಿಸೈನ್ ಮಾಡಿದೆ. ಈ ಹೋಟೆಲ್ ಮೂಲಕ ದುಬೈ ಮರಿನಾ, ಪಾಮ್ ಜುಮೇರಾ ಹಾಗೂ ಅರೇಬಿಯನ್ ಗಲ್ಫ್ ನ ಸುಂದರ ನೋಟ ಸಿಗಲಿದೆ ಎಂದು ಮೂಲಗಳು ಹೇಳಿವೆ.
ಐಷಾರಾಮಿ ಇಂಟೀರಿಯರ್, ಗ್ಲಾಸ್ ಮೂಲಕ ಪಾರದರ್ಶಕ ನೋಟ ಸೇರಿದಂತೆ ಹಲವಾರು ಸೌಲಭ್ಯಗಳು ಇದರಲ್ಲಿರಲಿದ್ದು, ದೇಶದ ಹಾಗೂ ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲಿದೆ. Ciel ಈಗಾಗಲೇ ಅಂತರಾಷ್ಟ್ರೀಯ ಹೋಟೆಲ್ ಆರ್ಕಿಟೆಕ್ಚರ್ ಪ್ರಶಸ್ತಿ, ಅರೇಬಿಯನ್ ಹೋಟೆಲ್ ಆರ್ಕಿಟೆಕ್ಚರ್ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನವಾಗಿದ್ದು, ಈಗ ಇದರ ಮುಡಿಗೆ ಮತ್ತೊಂದು ಗರಿ ಸೇರಲಿದೆ.