ದುಬೈನಿಂದ ದೆಹಲಿಗೆ ಬಂದಿಳಿದ ಭಾರತೀಯ ಪ್ರಯಾಣಿಕನೋರ್ವನನ್ನ ಇಂಧಿರಾಗಾಂಧಿ ಅಂತರಾಷ್ಟ್ರೀಯ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತ ತನ್ನ ಲೆದರ್ ಬೆಲ್ಟ್ ನ ಅಡಿಯಲ್ಲಿ ಒಂದು ಕೋಟಿಗು ಹೆಚ್ಚು ಬೆಲೆ ಬಾಳುವ ಚಿನ್ನವನ್ನ ಸಾಗಿಸುತ್ತಿದ್ದ ಎಂದು ಏರ್ಪೋರ್ಟ್ ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶನಿವಾರ ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆರೋಪಿಯ ಪ್ರೊಫೈಲಿಂಗ್ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಮೂಡಿದೆ.
ಆನಂತರ ಆತನನ್ನ ವಶಕ್ಕೆ ಪಡೆದುಕೊಂಡು ಸಂಪೂರ್ಣ ತನಿಖೆ ನಡಸಿದ ನಂತರ, ಆತನ ಲೆದರ್ ವೇಸ್ಟ್ ಬೆಲ್ಟ್ ನ ಅಡಿಯಲ್ಲಿ ಸರಗಳ ರೂಪದಲ್ಲಿದ್ದ ಚಿನ್ನವನ್ನ ಸೊಂಟಕ್ಕೆ ಸುತ್ತಿಕೊಂಡಿದ್ದು ಬಯಲಾಗಿದೆ. ಬಂಧಿತ ಸೊಂಟಕ್ಕೆ ಸುತ್ತಿಕೊಂಡಿದ್ದು ಬರೋಬ್ಬರಿ 2,330 ಗ್ರಾಂ ಕಚ್ಚಾ ಚಿನ್ನ, ಇದರ ಬೆಲೆ ಸುಮಾರು ಒಂದು ಕೋಟಿ. ಈ ಹಿಂದೆ ನಾಲ್ಕು ಬಾರಿ ಇದೇ ರೀತಿ ಚಿನ್ನದ ಸರಗಳನ್ನು ಕಳ್ಳಸಾಗಣೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಅವನು ಈವರೆಗೆ ಕಳ್ಳಸಾಗಣೆ ಮಾಡಿದ ಚಿನ್ನದ ಒಟ್ಟು ಮೌಲ್ಯ ಸುಮಾರು 2.6 ಕೋಟಿ ರೂ. ಇದೀಗ ಆತನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ವಾರದ ಆರಂಭದಲ್ಲಿ, ಪ್ಯಾರಿಸ್ ಮತ್ತು ದುಬೈನಿಂದ ಎರಡು ಪ್ರತ್ಯೇಕ ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ ಕಸ್ಟಮ್ಸ್ ಇಲಾಖೆಯು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಬ್ಬ ಪುರುಷ ಮತ್ತು ಮಹಿಳೆಯನ್ನು ಬಂಧಿಸಿತ್ತು. ಈ ಎರಡು ಪ್ರಕರಣಗಳಲ್ಲಿ ಪತ್ತೆಯಾಗಿರುವ ಚಿನ್ನದ ಒಟ್ಟು ಮೌಲ್ಯ ಸುಮಾರು 70 ಲಕ್ಷ ರೂ.