ದುಬೈ ಎಂದರೇನೆ ಹಾಗೆ. ಅಲ್ಲಿ, ಗಗನಚುಂಬಿ ಕಟ್ಟಡಗಳಿಗೆ ಬರವಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಗೆ ಎಣೆಯೇ ಇಲ್ಲ. ಪ್ರತಿ ವರ್ಷ ಜಗತ್ತಿನಲ್ಲೇ ಹಲವು ಅಚ್ಚರಿ ಸೃಷ್ಟಿಸುವುದನ್ನೇ ಅಭ್ಯಾಸ ಮಾಡಿಕೊಂಡಿರುವ ದುಬೈ ಈಗ ಇನ್ಫಿನಿಟಿ ಬ್ರಿಡ್ಜ್ ನಿರ್ಮಿಸುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಕಳೆದ ವಾರವೇ ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಡೈರಾ ಹಾಗೂ ಬುರ್ ದುಬೈಗೆ ಸಂಪರ್ಕ ಕಲ್ಪಿಸುವ ದಿಸೆಯಲ್ಲಿ ದುಬೈನಲ್ಲಿ ಮೊದಲ ಬಾರಿಗೆ ʼಇನ್ಫಿನಿಟಿ ಸೇತುವೆʼ ನಿರ್ಮಿಸಲಾಗಿದ್ದು, ಇದು ಇನ್ಫಿನಿಟಿಯ ಮಾದರಿಯಲ್ಲಿಯೇ ನಿರ್ಮಿಸಲಾಗಿದೆ.
ಆರು ಲೇನ್‌ಗಳನ್ನು ಹೊಂದಿರುವ ಸೇತುವೆಯು 300 ಮೀಟರ್ ಉದ್ದವಿದ್ದರೆ, 22 ಮೀಟರ್ ಅಗಲವಿದೆ. ಗಂಟೆಗೆ 24 ಸಾವಿರ ವಾಹನಗಳು ಈ ಬ್ರಿಡ್ಜ್ ಮೂಲಕ ಓಡಾಡಬಹುದಾಗಿದ್ದು, ಸೈಕಲ್ ಸವಾರರು ಹಾಗೂ ಪಾದಚಾರಿಗಳಿಗೆ ಮೂರು ಮೀಟರ್ ಜಾಗ ಮೀಸಲಿರಿಸಲಾಗಿದೆ. ಅಲ್ ಶಿಂದಾಘ ಕಾರಿಡಾರ್ ಪ್ರಾಜೆಕ್ಟ್ ಯೋಜನೆ ಅಡಿಯಲ್ಲಿ ಸೇತುವೆ ನಿರ್ಮಿಸಲಾಗಿದ್ದು, 2018ರಲ್ಲಿ ಮೊದಲ ಬಾರಿ ಯೋಜನೆ ಘೋಷಿಸಲಾಗಿತ್ತು.
ಸೇತುವೆ ಕುರಿತು ಮಾತನಾಡಿರುವ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್, ಆರ್ಥಿಕ ಏಳಿಗೆ, ಸಮಾಜ ಕಲ್ಯಾಣಕ್ಕಾಗಿ ರಸ್ತೆ ಹಾಗೂ ರಸ್ತೆ ಸಾರಿಗೆಯು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಇದಕ್ಕಾಗಿ ದುಬೈ ಹತ್ತಾರು ಯೋಜನೆಗಳನ್ನು ರೂಪಿಸಿ, ಕೋಟ್ಯಂತರ ರೂ. ವ್ಯಯಿಸಿದೆ. ಮುಂದಿನ ದಿನಗಳಲ್ಲೂ ಇಂತಹ ಹಲವು ಯೋಜನೆಗಳು ಜಾರಿಯಾಗಲಿವೆ ಎಂದಿದ್ದಾರೆ. ದುಬೈನ ಘನತೆ ಹೆಚ್ಚಿಸಿರುವ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾ, ಕಯಾನ್ ಟವರ್ ಗಳ ಸಾಲಿಗೆ ಸೇತುವೆಯೂ ಸೇರುತ್ತದೆ ಎನ್ನಲಾಗಿದೆ.