ದುಬೈ: ಉದ್ಯೋಗ ವೆಬ್‌ಸೈಟ್‌ನಲ್ಲಿ ಕೆಲಸ ಹುಡುಕಲು ವಿಫಲವಾದ ನಂತರ, ದುಬೈನ ವ್ಯಕ್ತಿಯೊಬ್ಬರು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಜನರಿಗೆ ಚಾಕೊಲೇಟ್ ಬಾರ್‌ನೊಂದಿಗೆ ತಮ್ಮ ಬಯೋಡೇಟಾ ಹಸ್ತಾಂತರಿಸಲು ತೀರ್ಮಾನಿಸಿದ್ದಾನೆ. ಅದರಂತೆಯೇ ಈ ವ್ಯಕ್ತಿ ನಡೆದುಕೊಳ್ಳುತ್ತಿದ್ದು, ಅದರ ಫೋಟೋ ವೈರಲ್ ಆಗಿದೆ.
“ನೀವು ನನಗೆ ಉದ್ಯೋಗವನ್ನು ಪಡೆಯಲು ಸಹಾಯ ಮಾಡಿದರೆ ನಾನು ನಿಮಗೆ ಕೃತಜ್ಞನಾಗಿರುತ್ತೇನೆ. ನಿಮಗೆ ಪ್ರೀತಿ ಮತ್ತು ಸಂತೋಷದಿಂದ ತುಂಬಿರುವ ಸುಂದರ ದಿನವನ್ನು ನಾನು ಬಯಸುತ್ತೇನೆ” ಎಂದು ಬರೆದು ತನ್ನ ಬಯೋಡೇಟಾ ಅನ್ನು ಈ ವ್ಯಕ್ತಿ ನೀಡುತ್ತಿದ್ದಾನೆ. ಅದರಲ್ಲಿ ತನ್ನ ಹೆಸರು ಮತ್ತು ಸಂಪರ್ಕ ವಿವರಗಳನ್ನು ನಮೂದಿಸಿದ್ದಾನೆ.
ದುಬೈ ಮರೀನಾದಲ್ಲಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಜನರಿಗೆ ಮಿನಿ ಚಾಕೊಲೇಟ್ ಬಾರ್ ಜೊತೆಗೆ ತನ್ನ ಸಿವಿ ಹಸ್ತಾಂತರಿಸುತ್ತಿರುವುದನ್ನು ಕಾಣಬಹುದಾಗಿದೆ. ನವರ್ ಮೌಖಲತಿ ಎಂಬ ಈ ಯುವಕ ಬಯೋಡೇಟಾದಲ್ಲಿ ತನ್ನ ಹಿಂದಿನ ಕೆಲಸದ ಅನುಭವಗಳನ್ನು ಪಟ್ಟಿ ಮಾಡಿದ್ದಾನೆ. ಅಲ್ ಜರ್ಕಾ ವಿಶ್ವವಿದ್ಯಾಲಯದಲ್ಲಿ ವ್ಯವಹಾರ ವಿಷಯದಲ್ಲಿ ಅಧ್ಯಯನ ಮಾಡಿರುವ ಈತ, ಅರೇಬಿಕ್ ಮತ್ತು ಇಂಗ್ಲಿಷ್ ಚೆನ್ನಾಗಿ ಬಲ್ಲ. ತಾನು ವಿವಿಧ ಕಚೇರಿಗಳಲ್ಲಿ ಮಾರಾಟ ಪ್ರತಿನಿಧಿಯಾಗಿ ಹಲವು ವರ್ಷಗಳ ಅನುಭವ ಹೊಂದಿರುವ ಕುರಿತು ಬಯೋಡೇಟಾದಲ್ಲಿ ಈತ ಹೇಳಿಕೊಂಡಿದ್ದಾನೆ.
ನಾನು ಲಿಂಕ್ಡ್‌ಇನ್ ಖಾತೆಯಲ್ಲಿ ನನ್ನ ವಿವರ ಹಾಕಿದ್ದೇನೆ. ಆದರೆ ಇದುವರೆಗೆ ಯಾವ ಕೆಲಸವೂ ಸಿಗಲಿಲ್ಲ. ಆದ್ದರಿಂದ ಹೀಗೆ ದುಬೈ ಸಿಗ್ನಲ್‌ಗಳಲ್ಲಿ ನನ್ನ ಸಿವಿಯನ್ನು ವಿತರಿಸಲು ಪ್ರಾರಂಭಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈತನೇ ಶೇರ್ ಮಾಡಿಕೊಂಡಿದ್ದಾನೆ. ಈತನಿಗೆ ಹಲವು ನೆಟ್ಟಿಗರು ಧೈರ್ಯ ತುಂಬಿದ್ದು ಶೀಘ್ರ ಕೆಲಸ ಸಿಗಲಿ ಎಂದು ಹಾರೈಸಿದ್ದಾರೆ.