
ಕುಡಿದ ನಶೆಯಲ್ಲಿ ಮಾಜಿ ಪ್ರೇಯಸಿ ಮನೆಗೆ ಕಿಟಕಿಯಿಂದ ನುಗ್ಗಲು ಮುಂದಾಗಿದ್ದು, ಯುವಕನಿಗೆ ದುಬಾರಿಯಾಗಿ ಪರಿಣಮಿಸಿದೆ. ದೀರ್ಘಕಾಲದವರೆಗೆ ಕಿಟಕಿಯಲ್ಲಿ ಸಿಲುಕಿಕೊಂಡಿದ್ದ ಯುವಕ, ಅಲ್ಲಿಂದ ಹೊರ ಬರಲು ಪೇಚಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು, ಆತನನ್ನು ರಕ್ಷಿಸಿದ್ದಾರೆ.
ವ್ಯಕ್ತಿಗೆ ಯಾವುದೇ ದೊಡ್ಡ ಗಾಯವಾಗಿಲ್ಲ. ಆದರೆ ಉಸಿರುಗಟ್ಟಿ ಸಾವನ್ನಪ್ಪುವ ಸಾಧ್ಯತೆಯಿತ್ತು ಎಂದು ವೈದ್ಯರು ಹೇಳಿದ್ದಾರೆ. ಯುವಕ, ಮಾಜಿ ಗೆಳತಿಗೆ ಸಂಬಂಧ ಹೊಂದುವಂತೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.ಯುವತಿ ಇದನ್ನು ನಿರಾಕರಿಸಿದ ಕಾರಣ ಮನೆಯೊಳಗೆ ಪ್ರವೇಶಿಸಲು ಮುಂದಾಗಿದ್ದಾನೆ.
ಘಟನೆ ಉಕ್ರೇನ್ನ ಖೇರ್ಸನ್ ಪ್ರದೇಶದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಯುವಕ, ಮಾಜಿ ಗೆಳತಿಯ ಮನೆಗೆ ಪ್ರವೇಶಿಸಲು ಯತ್ನಿಸಿದ್ದಾನೆ. ಕಿಟಕಿಯೊಳಗೆ ಪ್ರವೇಶಿಸಿದ ಆತ ಅಲ್ಲೇ ಸಿಕ್ಕಿಬಿದ್ದಿದ್ದಾನೆ. ಅಮಲಿನಲ್ಲಿದ್ದ ಕಾರಣ ಆತನಿಗೆ ಹೊರಗೆ ಬರಲು ಆಗಲಿಲ್ಲ. ಈ ಸಮಯದಲ್ಲಿ ಮನೆಯಲ್ಲಿದ್ದ ಪ್ರೇಯಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು, ಸಾಕಷ್ಟು ಕಷ್ಟಪಟ್ಟು ಆತನನ್ನು ಹೊರಗೆ ತೆಗೆದಿದ್ದಾರೆ. ಆತ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆತನಿಗೆ ಉಸಿರಾಡಲು ಸಮಸ್ಯೆಯಾಗ್ತಿತ್ತು. ಇನ್ನೊಂದಿಷ್ಟು ಸಮಯ ಕಳೆದಿದ್ದರೆ ಆತ ಸಾವನ್ನಪ್ಪುವ ಸಾಧ್ಯತೆಯಿತ್ತು ಎಂದು ಪೊಲೀಸರು ಹೇಳಿದ್ದಾರೆ.