ಹೈದರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿರುವ ಘಟನೆ ಹೈದರಾಬಾದ್‌ನ ಹೊರವಲಯದ ಬಾಲಾಜಿ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ರಾಚಕೊಂಡ ಪೊಲೀಸ್ ಕಮಿಷನರೇಟ್‌ನ ಜವಾಹರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಾಜಿ ನಗರ ಬಸ್ ನಿಲ್ದಾಣದ ಬಳಿ ಭಾನುವಾರ ರಾತ್ರಿ 8.30ರ ಸುಮಾರಿಗೆ ನಡೆದ ಘಟನೆಯಲ್ಲಿ ಪೆದ್ದಮಾರಯ್ಯ ಎಂದು ಗುರುತಿಸಲಾದ ಆರೋಪಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿದ್ದಾನೆ..
ಕೂಲಿ ಕೆಲಸ ಮಾಡುವ ಪೆದ್ದ ಮಾರಯ್ಯ ನಿತ್ಯ ಕುಡುಕನಾಗಿದ್ದ. ಅವನ ಜೊತೆಯಲ್ಲಿ ಆತನ ತಾಯಿ ಇದ್ದರೂ, ಆಕೆ ಆತನನ್ನು ತಡೆಯಲು ಏನನ್ನೂ ಮಾಡಲಿಲ್ಲ. ಕೆಲವು ದಾರಿಹೋಕರು ಮಹಿಳೆಯನ್ನು ರಕ್ಷಿಸಲು ಮಧ್ಯಪ್ರವೇಶಿಸುವ ಬದಲು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಘಟನೆಯನ್ನು ಚಿತ್ರೀಕರಿಸಿದ್ದಾರೆ.
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳೆ ಆತನನ್ನು ತಳ್ಳುವ ಮೂಲಕ ತನ್ನನ್ನು ತಾನು ಉಳಿಸಿಕೊಳ್ಳಲು ಪ್ರಯತ್ನಿಸಿ ಅಲ್ಲಿಂದ ಹೋಗುತ್ತಿದ್ದಂತೆ, ಕೋಪಗೊಂಡ ಪೆದ್ದಮಾರಯ್ಯ ಆಕೆಯ ಮೇಲೆ ದಾಳಿ ಮಾಡಿ ಬಟ್ಟೆಗಳನ್ನು ಹರಿದು ಹಾಕಲು ಪ್ರಾರಂಭಿಸಿದನು. ಮಹಿಳೆಯನ್ನು ರಕ್ಷಿಸಲು ಅವರ ತಾಯಿ ಏನೂ ಮಾಡಲಿಲ್ಲ.
ಬೈಕ್‌ನಲ್ಲಿ ಹೋಗುತ್ತಿದ್ದ ಮತ್ತೊಬ್ಬ ಮಹಿಳೆ ಆತನನ್ನು ಪ್ರಶ್ನಿಸಲು ತಡೆದ ಕಾರಣ ಆರೋಪಿ ಆಕೆಯ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ಸಂತ್ರಸ್ತೆ ಸುಮಾರು 15 ನಿಮಿಷಗಳ ಕಾಲ ವಿವಸ್ತ್ರಳಾಗಿ ರಸ್ತೆಯಲ್ಲೇ ನಿಂತಿದ್ದರು. ಆರೋಪಿ ಸ್ಥಳದಿಂದ ಹೋದ ನಂತರ ಆಕೆಗೆ ಬಟ್ಟೆ ನೀಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 28 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.