ಶಾಹದೋಲ್(ಮಧ್ಯಪ್ರದೇಶ): ಶಾಹದೋಲ್ ಜಿಲ್ಲೆಯ ಬಿಯೋಹರಿ ಬ್ಲಾಕ್ ನ ಸರ್ಕಾರಿ ಶಾಲೆ ಶಿಕ್ಷಕನೊಬ್ಬ ಮದ್ಯ ಸೇವನೆ ಮಾಡಿ ತೂರಾಡಿದ ಘಟನೆ ನಡೆದಿದ್ದು, ಆತನನ್ನು ಅಮಾನತು ಮಾಡಲಾಗಿದೆ.
ವೀಡಿಯೊ ವೈರಲ್ ಆಗಿದ್ದು, ಪ್ರಾಥಮಿಕ ಶಾಲೆಯ ಶಿಕ್ಷಕ ಉದಯಭಾನ್ ಸಿಂಗ್ ನ್ಯಾಟ್ ಕುಡಿದು ತೂರಾಡಿದ್ದನ್ನು ಕಾಣಬಹುದಾಗಿದೆ. ಶನಿವಾರದಂದು ದಾಖಲಾದ ದೃಶ್ಯಗಳಲ್ಲಿ, ನ್ಯಾಟ್ ಕುಡಿದ ಸ್ಥಿತಿಯಲ್ಲಿ ತರಗತಿಯಲ್ಲಿ ಎಡವಿ ಬಿದ್ದಿರುವುದನ್ನು ಕಾಣಬಹುದು. ಕೆಲವು ದಿನಗಳ ಹಿಂದೆ ತೆಗೆದ ಮತ್ತೊಂದು ವೀಡಿಯೊ, ನ್ಯಾಟ್ ಮಕ್ಕಳ ನಡುವೆ ಎರಡು ಕುರ್ಚಿಗಳ ಮೇಲೆ ತನ್ನ ಪಾದಗಳನ್ನು ಇಟ್ಟುಕೊಂಡು, ಅಮಲೇರಿದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ.
ವೀಡಿಯೊ ಪ್ರಸಾರವಾದ ನಂತರ ಶಿಕ್ಷಣ ಇಲಾಖೆ ಕ್ರಮ ಕೈಗೊಂಡು ನೋಟಿಸ್ ನೀಡಿದೆ. ಉದಯಭಾನ್ ಸಿಂಗ್ ನ್ಯಾಟ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಹಿಂದಿನ ಎಚ್ಚರಿಕೆಗಳ ಹೊರತಾಗಿಯೂ, ಅವರ ನಡವಳಿಕೆಯಲ್ಲಿ ಯಾವುದೇ ಸುಧಾರಣೆ ಕಂಡುಬಾರದ ಕಾರಣ ಅಮಾನತು ಮಾಡಲಾಗಿದೆ.
ಘಟನೆಯ ನಂತರ ಬೆಹರಿ ಬ್ಲಾಕ್‌ನ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಟ್ ವಾಡಿಕೆಯಂತೆ ಮದ್ಯದ ಅಮಲಿನಲ್ಲಿ ಶಾಲೆಗೆ ಬರುತ್ತಾರೆ. ಶಿಕ್ಷಣ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಲಾಗಿತ್ತು. ಆದರೆ ಆಗ ಕ್ರಮ ಕೈಗೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.
ಕುಡಿದು ಶಾಲೆಗೆ ಬರುತ್ತಿದ್ದ ಶಿಕ್ಷಕ ಸರಿಯಾಗಿ ಪಾಠ ಮಾಡುತ್ತಿರಲಿಲ್ಲ. ತಡವಾಗಿ ಶಾಲೆಗೆ ಬರುತ್ತಿದ್ದ, ಸಮಯಕ್ಕಿಂತ ಮೊದಲೇ ಮಕ್ಕಳನ್ನು ಮನೆಗೆ ಕಳಿಸುತ್ತಿದ್ದ. ಶಾಲೆಯಲ್ಲೇ ಮಲಗಿ ಮನೆಗೆ ಹೋಗುತ್ತಿದ್ದ ಎಂದು ಗ್ರಾಮಸ್ಥರು ದೂರಿದ್ದಾರೆ.