ಹಮೀರ್‌ಪುರ: ಕುಡಿದ ಅಮಲಿನಲ್ಲಿ ಶಾಲೆಗೆ ಬಂದ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬ, ತರಗತಿಯೊಳಗಿನ ಕುರ್ಚಿಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.
ಈ ಘಟನೆ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ, ಶಿಕ್ಷಕ ಕುಡಿದು ಶಾಲೆಗೆ ಬಂದಿದ್ದಾನೆ ಎಂಬ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಸ್ಥಳಕ್ಕಾಗಮಿಸಿ, ಆತನನ್ನು ಕುರ್ಚಿಯಿಂದ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ, ಶಿಕ್ಷಕ ವಿಪರೀತ ಕುಡಿದಿದ್ದರಿಂದ ಪ್ರಜ್ಞಾಹೀನನಾಗಿ ಬಿದ್ದಿದ್ದರು. ಹೀಗಾಗಿ ಕುರ್ಚಿಯಿಂದ ಮೇಲೇಳಲು ಸಾಧ್ಯವಾಗಿಲ್ಲ.
ಈ ವೇಳೆ ಸ್ಥಳೀಯರು ಶಿಕ್ಷಕ ಇರುವ ಸ್ಥಿತಿಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಶಿಕ್ಷಕ ಪ್ರಜ್ಞಾಹೀನ ಸ್ಥಿತಿಯಿಂದ ಎಚ್ಚರಗೊಂಡ ನಂತರವೇ ಸ್ಥಳೀಯರು ಅಲ್ಲಿಂದ ತೆರಳುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಸ್ಥಳೀಯರ ಹೇಳುವ ಪ್ರಕಾರ, ಶಿಕ್ಷಕ ಕುಡಿದು ಶಾಲೆಗೆ ಬಂದಿರುವುದು ಇದೇ ಮೊದಲಲ್ಲ. ಹಲವಾರು ಎಚ್ಚರಿಕೆಗಳ ಹೊರತಾಗಿಯೂ, ತಮ್ಮ ನಡವಳಿಕೆಯನ್ನು ಮುಂದುವರೆಸಿದ್ದಾರೆ ಎಂದು ದೂರಿದ್ದಾರೆ.
ಇನ್ನು ಘಟನೆ ಕುರಿತು ಮಾತನಾಡಿದ ಜಿಲ್ಲಾ ಶಿಕ್ಷಣಾಧಿಕಾರಿ ಅಲೋಕ್ ಸಿಂಗ್, ಈ ಕುರಿತು ತನಿಖೆ ನಡೆಸಲಾಗಿದೆ. ಶಿಕ್ಷಕ ತಪ್ಪಿತಸ್ಥರೆಂದು ಕಂಡುಬಂದಿದ್ದು, ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.