ಪ್ರಾಣಿಬಲಿ ನೀಡುವ ವೇಳೆ ವ್ಯಕ್ತಿಯೊಬ್ಬನನ್ನ ಆಕಸ್ಮಿಕವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಲಸಪಲ್ಲಿ ಗ್ರಾಮದಲ್ಲಿ ನಡೆದಿದೆ. ಜನವರಿ 16 ರ ಭಾನುವಾರದಂದು, ಮಕರ ಸಂಕ್ರಾತಿ ಆಚರಣೆ ವೇಳೆ ಈ ಘಟನೆ ನಡೆದಿದೆ.
ಆರೋಪಿ ಚಲಪತಿ ಪ್ರಾಣಿ ಬಲಿ ನೀಡುವ ಸಲುವಾಗಿ ಮೇಕೆಯ ತಲೆಯನ್ನು ಕಡಿಯಬೇಕಿತ್ತು. ಆದರೆ ಕುಡಿತದ ಅಮಲಿನಲ್ಲೆ ಹಬ್ಬಕ್ಕೆ ಬಂದಿದ್ದ ಚಲಪತಿ, ಬಲಿ ಕೊಡುವ ವೇಳೆ, ಪ್ರಾಣಿಯನ್ನ ಹಿಡಿದುಕೊಂಡಿದ್ದವನ ಕತ್ತನ್ನೆ ಕಡಿದಿದ್ದಾನೆ. ಮೃತ ದುರ್ದೈವಿಯನ್ನ ಸುರೇಶ್ ಎಂದು ಗುರುತಿಸಲಾಗಿದೆ.
ಆಂಧ್ರಪ್ರದೇಶದ ಆರಾಧ್ಯ ದೇವತೆ ಯಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ಪ್ರಾಣಿ ಬಲಿ ಕೊಡಲು ಆಯೋಜಿಸಲಾಗಿತ್ತು. ಮಕರ ಸಂಕ್ರಾಂತಿಯ ಹೊಸತೊಡಕು ಸಂಭ್ರಮದಲ್ಲಿದ್ದ ಸ್ಥಳೀಯರೆಲ್ಲರು ದೇವಸ್ಥಾನಕ್ಕೆ ಬಂದು ಮೇಕೆ, ಕುರಿಗಳನ್ನ ಬಲಿ ಕೊಡುತ್ತಿದ್ದರು.
ಅದೇ ಹಬ್ಬದ ಸಂಭ್ರಮದಲ್ಲಿದ್ದ ಸುರೇಶ್ ಸಹ ಬಲಿ ಕೊಡುವ ಜಾಗಕ್ಕೆ ಬಂದು, ಮೇಕೆಯ ಬದಲು ತಾವೇ ಬಲಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸುರೇಶ್ ಅವರನ್ನು ಕೂಡಲೇ ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಚಲಪತಿಯನ್ನ ಬಂಧಿಸಿದ್ದಾರೆ.