ಕೇರಳದ ತಿರುವಲ್ಲಾದಲ್ಲಿ ಕೊನೆಯ ಬಸ್ ತಪ್ಪಿಹೋದ ಮತ್ತು ಪರ್ಯಾಯ ಸಾರಿಗೆಗೆ ಹಣವಿಲ್ಲದ ಕಾರಣ, ಒಬ್ಬ ವ್ಯಕ್ತಿ ಕೆಎಸ್‌ಆರ್‌ಟಿಸಿ ಬಸ್ಸನ್ನು ತೆಗೆದುಕೊಂಡು ಹೋಗಲು ಯತ್ನಿಸಿದ ವಿಚಿತ್ರ ಘಟನೆ ನಡೆದಿದೆ.
ಜೆಬಿನ್ ಎಂಬ ಯುವಕ, ತನ್ನ ಇಬ್ಬರು ಸ್ನೇಹಿತರೊಂದಿಗೆ ಮಲ್ಲಪಳ್ಳಿಗೆ ತೆರಳಲು ತಿರುವಲ್ಲಾ ಡಿಪೋಗೆ ಹಲವು ಬಾರಿ ಭೇಟಿ ನೀಡಿದ್ದ. ಆದರೆ, ರಾತ್ರಿ 8 ಗಂಟೆಗೆ ಕೊನೆಯ ಬಸ್ ತೆರಳಿತ್ತು. ಬೇರೆ ದಾರಿ ಕಾಣದ ಜೆಬಿನ್, ಮದ್ಯದ ಅಮಲಿನಲ್ಲಿದ್ದ ಕಾರಣ, ಡಿಪೋದಲ್ಲಿ ನಿಲ್ಲಿಸಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು ರಾತ್ರಿ 10:15 ರ ಸುಮಾರಿಗೆ ಹತ್ತಿದ್ದ.
ಮರುದಿನ ಬೆಳಿಗ್ಗೆ 5:45 ಕ್ಕೆ ಹೊರಡಬೇಕಿದ್ದ ಬಸ್ಸನ್ನು ಚಾಲಕ ಹಿಂದಿನ ರಾತ್ರಿ 10 ಗಂಟೆಗೆ ಕೀ ಇಲ್ಲದೆ ಡಿಪೋದಲ್ಲಿ ನಿಲ್ಲಿಸಿ ಹೋಗಿದ್ದ. ಜೆಬಿನ್ ಹೇಗೋ ಮಾಡಿ ಬಸ್ಸಿನ ಇಂಜಿನ್ ಚಾಲೂ ಮಾಡಿ, ಮಲ್ಲಪಳ್ಳಿಗೆ ತಾನೇ ಓಡಿಸಿಕೊಂಡು ಹೋಗುವ ಯೋಚನೆಯಲ್ಲಿದ್ದನು.
ಆದರೆ, ಬಸ್ಸನ್ನು ಹಿಂದಕ್ಕೆ ತೆಗೆದುಕೊಂಡು ತಿರುಗಿಸಲು ಯತ್ನಿಸುವಾಗ ಅಲ್ಲಿದ್ದ ಕೆಲವರು ಆತನನ್ನು ತಡೆದಿದ್ದು, ವಿಷಯ ತಿಳಿದು ಡಿಪೋ ಅಧಿಕಾರಿಗಳು ಜೆಬಿನ್‌ನನ್ನು ಬಸ್ಸಿನಿಂದ ಕೆಳಗಿಳಿಯುವಂತೆ ಹೇಳಿದರು, ಆದರೆ ಆತ ನಿರಾಕರಿಸಿದ ನಂತರ ಪೊಲೀಸರು ಸ್ಥಳಕ್ಕೆ ಬಂದು ಜೆಬಿನ್‌ನನ್ನು ಬಸ್ಸಿನಿಂದ ಹೊರಗೆ ಕರೆದೊಯ್ದಿದ್ದು, ಆತನ ಇಬ್ಬರು ಸ್ನೇಹಿತರು ಪರಾರಿಯಾಗಿದ್ದಾರೆ.
ಡಿವೈಎಸ್‌ಪಿ ಎಸ್. ಅಷಾದ್ ಪ್ರಕಾರ, ಜೆಬಿನ್ ವಿಚಾರಣೆಯ ಸಮಯದಲ್ಲಿ ಗೊಂದಲದಲ್ಲಿ ಕಾಣುತ್ತಿದ್ದನು. ತಾನು ಭಾರಿ ವಾಹನ (ಬ್ಯಾಕ್‌ಹೋ ಲೋಡರ್) ಚಾಲಕನಾಗಿದ್ದರಿಂದ ಬಸ್ ಓಡಿಸುವುದರಲ್ಲಿ ಏನು ತಪ್ಪಿದೆ ಎಂದು ಕೇಳಿದ್ದನು. ಡಿಪೋ ಅಧಿಕಾರಿಗಳು ಜೆಬಿನ್ ಕುಡಿದಿದ್ದನ್ನು ಖಚಿತಪಡಿಸಿದ್ದು, ಈಗ ಆತನನ್ನು ಬಂಧಿಸಿ, ಕೆಎಸ್‌ಆರ್‌ಟಿಸಿ ಬಸ್ ಅಪಹರಿಸಲು ಯತ್ನಿಸಿದ ಆರೋಪ ಹೊರಿಸಲಾಗಿದೆ.