ಗೋವಾ: ಪಬ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ, ಗೋವಾಕ್ಕೆ ನಿಯೋಜಿಸಲಾದ ಐಪಿಎಸ್ ಅಧಿಕಾರಿ ಕೋನ್ ಅವರನ್ನು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಹುದ್ದೆಯಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ವರದಿ ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಐಪಿಎಸ್ ಅಧಿಕಾರಿ ಸೋಮವಾರ ರಾತ್ರಿ ಗೋವಾದ ಬಾರ್‌ನಲ್ಲಿ ಮಹಿಳೆಯೊಬ್ಬರನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಡಿಐಜಿ ಮಹಿಳೆಯೊಂದಿಗೆ ಜಗಳವಾಡುತ್ತಿರುವುದನ್ನು ನೋಡಬಹುದು. ಟೋಪಿ ಧರಿಸಿರುವ ವ್ಯಕ್ತಿಯನ್ನು ಬೌನ್ಸರ್ ಹೊರಗೆ ಕರೆತರುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಕಂಠಪೂರ್ತಿ ಮದ್ಯ ಕುಡಿದಿದ್ದಾರೆ ಎಂಬುದು ವಿಡಿಯೋ ನೋಡಿದ್ರೆ ತಿಳಿಯುತ್ತದೆ.
ಅನಾರೋಗ್ಯದ ಕಾರಣ ಕೋನ್ ಅವರು ಆಗಸ್ಟ್ 1 ರಿಂದ ಆಗಸ್ಟ್ 14 ರವರೆಗೆ ತಮ್ಮ ಕಚೇರಿಯಿಂದ ರಜೆ ತೆಗೆದುಕೊಂಡಿದ್ದರು. ಅವರು ವಾಸ್ಕೋದಲ್ಲಿ ತಂಗಿದ್ದರು. ಆದರೆ, ಅವರು 40 ಕಿ.ಮೀ ದೂರದ ಉತ್ತರ ಗೋವಾದ ಜನಪ್ರಿಯ ಪ್ರವಾಸಿ ತಾಣವಾದ ಕ್ಯಾಲಂಗುಟ್‌ನ ಹೋಟೆಲಿನಲ್ಲಿ ಕಾಣಿಸಿಕೊಂಡರು.
ಬುಧವಾರ ಸದನದಲ್ಲಿ ಗೋವಾ ಫಾರ್ವರ್ಡ್ ಪಾರ್ಟಿಯ (ಜಿಎಫ್‌ಪಿ) ವಿಜಯ್ ಸರ್ದೇಸಾಯಿ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ, ಸಿಎಂ ಸಾವಂತ್ ಅಂತಹ ನಡವಳಿಕೆಯನ್ನು ಸಹಿಸುವುದಿಲ್ಲ ಎಂದು ಹೇಳಿದ್ರು.