ತಂದೆಯೊಬ್ಬ ತನ್ನ ಪುತ್ರಿಗೆ ಮನಬಂದಂತೆ ಥಳಿಸುತ್ತಿರುವ ಅಮಾನವೀಯ ಘಟನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದ ಘಟನೆ ಇದಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ಈ ವಿಡಿಯೋವನ್ನು ಆರೋಪಿಯ ಪತ್ನಿ ರೆಕಾರ್ಡ್ ಮಾಡಿದ್ದಾರೆ. ವಿಡಿಯೋದಲ್ಲಿ ರಾಜೇಶ್ ಶುಕ್ಲಾ ತನ್ನ ಪುತ್ರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೇ ಚಪ್ಪಲಿಯಿಂದ ಹೊಡೆದಿದ್ದಾನೆ. ವಿಡಿಯೋದಲ್ಲಿರುವ ಸಂತ್ರಸ್ತೆಯು ಅಳುತ್ತಿರೋದನ್ನು ಕಾಣಬಹುದಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಆರತಿ ಶುಕ್ಲಾರ ಪತಿ ರಾಜೇಶ್ ಶುಕ್ಲಾ ಪದೇ ಪದೇ ಪುತ್ರಿಗೆ ಥಳಿಸುತ್ತಿದ್ದ ಎನ್ನಲಾಗಿದೆ. ಕುಡಿದು ಮನೆಗೆ ಬರುತ್ತಿದ್ದ ಪತಿ ಮಗಳಿಗೆ ಮನಬಂದಂತೆ ಥಳಿಸುತ್ತಿದ್ದರು ಎಂದು ಆರತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮದ್ಯವ್ಯಸನಿಯಾಗಿದ್ದ ರಾಜೇಶ್ ತನ್ನ ಸ್ನೇಹಿತರನ್ನು ಮನೆಗೆ ಆಹ್ವಾನಿಸುತ್ತಿದ್ದ. ಇವರೆಲ್ಲ ಮದ್ಯಪಾನ ಮಾಡುತ್ತಿದ್ದರು. ರಾಜೇಶ್ ತನ್ನ ವಯಸ್ಸಿನ ಸ್ನೇಹಿತರ ಜೊತೆ ಲೈಂಗಿಕ ಸಂಬಂಧ ಬೆಳೆಸುವಂತೆ ಪುತ್ರಿಯನ್ನು ಪೀಡಿಸುತ್ತಿದ್ದ ಎಂದು ಆರತಿ ಆರೋಪಿಸಿದ್ದಾರೆ.
ಆದರೆ ತಂದೆಯ ಮಾತಿಗೆ ಪುತ್ರಿಯು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಆಕೆಗೆ ಮನಬಂದಂತೆ ಥಳಿಸುತ್ತಿದ್ದ. ಇದರಿಂದ ಬೇಸತ್ತಿದ್ದ ಆರತಿ ವಿಡಿಯೋ ರೆಕಾರ್ಡ್ ಮಾಡಿದ್ದು ಮಾತ್ರವಲ್ಲದೇ ಕಾನ್ಪುರದ ವಿಧು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ರಾಜೇಶ್ ಶರ್ಮಾನನ್ನು ಬಂಧಿಸಿದ್ದಾರೆ.