ಹೈದರಾಬಾದ್: ಇಬ್ಬರು ನಟಿಯರು ಸೇರಿದಂತೆ ಮೂವರಿಗೆ ಮಧ್ಯರಾತ್ರಿ ಜಾಲಿ ರೈಡ್ ಮಾರಣಾಂತಿಕವಾಗಿ ಪರಿಣಮಿಸಿದೆ. ಗಚಿಬೌಲಿ ಪೊಲೀಸ್ ವ್ಯಾಪ್ತಿಯ ಹೆಚ್‌ಸಿಯು ಬಳಿ ಕಾರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಮತ್ತು ಬ್ಯಾಂಕ್ ಉದ್ಯೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ಕನೆಯವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆಯಾದರೂ, ಅವರು ಕುಡಿದ ಸ್ಥಿತಿಯಲ್ಲಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತರನ್ನು ಬ್ಯಾಂಕ್ ಉದ್ಯೋಗಿ ಎನ್.ಮಾನಸ(22), ಎಂ.ಮಾನಸ(21) ಮತ್ತು ಅಬ್ದುಲ್ ರಹೀಂ(25) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಹಿಳೆಯರು ಮತ್ತು ಸಿದ್ದು ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರ ಮೀಮ್ ವೀಡಿಯೊಗಳು ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಜನಪ್ರಿಯತೆ ಗಳಿಸಿವೆ.
ಶನಿವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಾಲ್ವರು ಅಮೀರ್ ಪೇಟ್‌ನಿಂದ ಕಾರ್ ನಲ್ಲಿ ಹೊರಟು ಗಚ್ಚಿಬೌಲಿಗೆ ಬಂದರು ಎಂದು ಗಚ್ಚಿಬೌಲಿ ಇನ್ಸ್ ಪೆಕ್ಟರ್ ಜಿ. ಸುರೇಶ್ ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಅವರು ಚಹಾ ಕುಡಿಯಲು ಲಿಂಗಂಪಲ್ಲಿಗೆ ತೆರಳಿದರು, ಅಲ್ಲಿ ಹೆಚ್‌ಸಿಯು ದಾಟಿದ ನಂತರ, ವಾಹನ ಚಲಾಯಿಸುತ್ತಿದ್ದ ಅಬ್ದುಲ್ ರಹೀಂ ನಿಯಂತ್ರಣ ತಪ್ಪಿದ್ದು, ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವನ್ನಪ್ಪಿದರು. ದಾರಿಹೋಕರೊಬ್ಬರು ಈ ದುರ್ಘಟನೆಯನ್ನು ಗಮನಿಸಿ 100ರಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ.
ಜಾಯ್ ರೈಡ್‌ಗೆ ತೆರಳಿದ್ದ ನಾಲ್ವರು ಕುಡಿದ ಅಮಲಿನಲ್ಲಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಿಸಿಕೊಂಡು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ.