ಯೋಧನೊಬ್ಬ ಹೆತ್ತ ತಾಯಿಯನ್ನೇ ಮನಬಂದಂತೆ ಥಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಕೇರಳದ ಹರಿಪಾದ ಎಂಬಲ್ಲಿ ನಡೆದಿದೆ. ಅಲಕೊಟ್ಟಿಲ್ ಎಂಬ ಯೋಧನೇ ಕುಡಿದ ಅಮಲಿನಲ್ಲಿ ತನ್ನ 69 ವರ್ಷದ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ತಾಯಿಯನ್ನು ಕಾಲಿನಿಂದ ಒದ್ದು, ಕೆಳಗೆ ಬೀಳಿಸಿ ಎಳೆದಾಡಿ ಹಲ್ಲೆ ಮಾಡಿದ್ದಾನೆ. ಅಲ್ಲದೇ, ಮನಸೋ ಇಚ್ಛೆ ಬೈದಿದ್ದಾನೆ.
ಈ ಸಂದರ್ಭದಲ್ಲಿ ಸಹಾಯಕ್ಕಾಗಿ ತಾಯಿ ತನ್ನ ಇನ್ನೊಬ್ಬ ಮಗನನ್ನು ಕರೆದಿದ್ದಾರೆ. ಇದಕ್ಕೂ ಸಿಟ್ಟಾದ ಯೋಧ ತಾಯಿಗೆ ಬೈದು ಹಲ್ಲೆ ಮಾಡಿದ್ದಾನೆ. ಈ ಕುರಿತು ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ರಜೆಯ ಮೇಲೆ ಯೋಧ ಮನೆಗೆ ಬಂದಾಗ ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೆ. ಈ ವ್ಯಕ್ತಿ ಬೆಂಗಳೂರಿನಲ್ಲಿ ಟ್ರೇಡ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ಹಿಂದೆಯೂ ಈತ ತನ್ನ ಹಿರಿಯ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ್ದ ಆರೋಪದಲ್ಲಿ ಬಂಧಿಯಾಗಿದ್ದ.
ಆದರೆ, ಮಗನಿಂದ ಹಲ್ಲೆಗೆ ತುತ್ತಾಗಿ ಗಾಯಗೊಂಡಿರುವ ತಾಯಿ ಮಾತ್ರ ತನ್ನ ಮಮಕಾರದ ತಾಯ್ತನ ತೋರಿಸಿದ್ದಾರೆ. ಮಗನಿಂದ ಹಲ್ಲೆಯಾಗಿದ್ದನ್ನು ಪೊಲೀಸರು ಪ್ರಶ್ನಿಸಿದರೂ ಆತನ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಮಗನನ್ನು ಬಂಧಿಸದಂತೆ ಅಂಗಲಾಚಿದ್ದಾರೆ. ಆತನನ್ನು ಬಂಧಿಸಿದರೆ, ನನ್ನನ್ನು ಬಂಧಿಸಿ ಎಂದು ಪಟ್ಟು ಹಿಡಿದಿದ್ದಾರೆ.