ಇಂಫಾಲ್ : ಸರ್ಕಾರಗಳು ಎಷ್ಟೇ ಕಠಿಣ ಕ್ರಮಗಳನ್ನು ಜಾರಿಗೆ ತಂದರೂ ಡ್ರಗ್ ಮಾಫಿಯಾ ಮಾತ್ರ ಹತೋಟಿಗೆ ಬರುತ್ತಿಲ್ಲ. ಬರೋಬ್ಬರಿ 500 ಕೋಟಿ ರೂ. ಮೌಲ್ಯದ ಡ್ರಗ್ಸ್ ನ್ನು ಆಸ್ಸಾಂ ಪೊಲೀಸರು ವಶಪಡಿಸಿಕೊಂಡಿರುವ ಕುರಿತು ವರದಿಯಾಗಿದೆ.
ಭಾರತ ಹಾಗೂ ಮ್ಯಾನ್ಮಾರ್ ಗಡಿಯ ಹತ್ತಿರವಿರುವ ಮಣಿಪುರದ ಮೊರೆ ಪಟ್ಟಣದಲ್ಲಿ ಇಷ್ಟೊಂದು ಪ್ರಮಾಣದ ಡ್ರಗ್ಸ್ ನ್ನು ವಶಪಡಿಸಿಕೊಳ್ಳಲಾಗಿದೆ. ಈ ರಾಜ್ಯದ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದ ಡ್ರಗ್ಸ್ ನ್ನು ಈವರೆಗೆ ವಶಪಡಿಸಿಕೊಂಡಿರಲಿಲ್ಲ ಎಂದು ಅಲ್ಲಿನ ಪೊಲೀಸರು ಈ ಘಟನೆ ಕುರಿತು ಹೇಳಿದ್ದಾರೆ.
ಘಟನೆಯಲ್ಲಿ ಮ್ಯಾನ್ಮಾರ್ ಪ್ರಜೆಯನ್ನು ಬಂಧಿಸಲಾಗಿದೆ. ಆಸ್ಸಾಂ ರೈಫಲ್ಸ್ ಹಾಗೂ ರಾಜ್ಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗೋದಾಮಿನ ಮೇಲೆ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ 3,716 ಸೋಪ್ ಕೇಸ್ ಗಳಲ್ಲಿ ಪ್ಯಾಕ್ ಮಾಡಿದ್ದು ಸುಮಾರು 54 ಕೆಜಿ ಬ್ರೌನ್ ಶುಗರ್, 154 ಕೆಜಿಯ 152 ಪ್ಯಾಕೆಟ್ ಕ್ರಿಸ್ಟಲ್ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 500 ಕೋಟಿ ರೂಪಾಯಿಯಾಗಿದೆ ಎಂದು ತೆನುಗೋಪಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮಜಿತ್ ಮಾಹಿತಿ ನೀಡಿದ್ದಾರೆ.