ಗುವಾಹಟಿ: ಅಸ್ಸಾಂನಲ್ಲಿ 23 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸುಳಿವಿನ ಮೇರೆಗೆ ರಾಜ್ಯ ಪೊಲೀಸರು ಮತ್ತು ಸಿಆರ್‌ಪಿಎಫ್‌ನ ಜಂಟಿ ಕಾರ್ಯಾಚರಣೆ ತಂಡ ಬಸ್‌ನಲ್ಲಿ ನಾಗಾಲ್ಯಾಂಡ್‌ಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯಿಂದ 5 ಕೆಜಿ ಬ್ರೌನ್ ಶುಗರ್ ವಶಪಡಿಸಿಕೊಂಡಿದೆ ಎಂದು ಕರ್ಬಿ ಆಂಗ್ಲಾಂಗ್‌ನ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸೈಕಿಯಾ ತಿಳಿಸಿದ್ದಾರೆ.
ಬೋಕಜಾನ್ ಪ್ರದೇಶದಲ್ಲಿ ಬಸ್ ಅನ್ನು ತಡೆಹಿಡಿಯಲಾಗಿದ್ದು, ಬಂಧಿತ ವ್ಯಕ್ತಿಯನ್ನು ಬಿಹಾರದ ಸಿವಾನ್ ಜಿಲ್ಲೆಯ ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ವಶಪಡಿಸಿಕೊಂಡಿರುವ ಮಾದಕ ದ್ರವ್ಯದ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 15 ಕೋಟಿ ರೂ. ಆಗಿದೆ.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಗುವಾಹಟಿಯಲ್ಲಿ 8 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಗುಪ್ತಚರ ಮಾಹಿತಿ ಮೇರೆಗೆ ಭಾನುವಾರ ರಾತ್ರಿ ಬಸಿಷ್ಠ ಪೊಲೀಸ್ ಠಾಣೆ ವ್ಯಾಪ್ತಿಯ ನಲಪಾರದಲ್ಲಿ ಎರಡು ವಾಹನಗಳನ್ನು ತಡೆದು ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಈ ಎರಡು ವಾಹನಗಳಲ್ಲಿ 88 ಸೋಪ್ ಕೇಸ್ ಗಳಲ್ಲಿ ಸುಮಾರು 1.056 ಕೆ.ಜಿ ಹೆರಾಯಿನ್ ಸಾಗಿಸಲಾಗುತ್ತಿತ್ತು. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 8 ಕೋಟಿ ರೂ. ಮೌಲ್ಯದ್ದಾಗಿದೆ. ಬಂಧಿತರನ್ನು ಅಬ್ದುಲ್ ರೋಸಿದ್, ಮುಜ್ಜಮಿಲ್ ಹಕ್ ಮತ್ತು ಜಮಾಲ್ ಅಲಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.