ಮಡಿಕೇರಿ: ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಕೈದಿಯೊಬ್ಬರಿಗೆ ನೀಡಲು ತಂದ ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಮಾದಕ ವಸ್ತು ಪತ್ತೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
ಕೇರಳದ ಕಣ್ಣೂರು ಜಿಲ್ಲೆಯ ಸುರಬೀಲ್ (26) ಎಂಬಾತ ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿರುವ ಸನಮ್ ಎಂಬಾತನಿಗೆ ಟೂತ್‌ಪೇಸ್ಟ್, ಟೂತ್‌ಬ್ರಷ್, ಸೋಪು ಮತ್ತು ಎಣ್ಣೆ ತಂದಿದ್ದನು. ಕಾರಾಗೃಹ ಅಧೀಕ್ಷಕ ಸಂಜಯ್ ದತ್ತಿ ಅವರು ಪರಿಶೀಲನೆ ನಡೆಸುತ್ತಿದ್ದಾಗ ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಮಾದಕ ವಸ್ತು ಹ್ಯಾಶಿಶ್ ಪತ್ತೆಯಾಗಿದೆ.
ಆರೋಪಿ, ತಾನು ಸನಮ್‌ನ ಸೋದರ ಎಂದು ಹೇಳಿಕೊಂಡಿದ್ದನು. ಅಧೀಕ್ಷಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ, 24 ಗ್ರಾಂ ಹ್ಯಾಶಿಶ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮಡಿಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರೋಪಿಯ ವಿಚಾರಣೆ ನಡೆಯುತ್ತಿದ್ದು, ಮಾದಕ ವಸ್ತು ಎಲ್ಲಿಂದ ತರಲಾಗಿದೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಜೈಲಿನೊಳಗೆ ಮಾದಕ ವಸ್ತು ಸಾಗಿಸಲು ಯತ್ನಿಸಿದ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ.