
ಶಿವಮೊಗ್ಗ: ರಾಜ್ಯದಲ್ಲಿ ಮಾದಕ ವಸ್ತುಗಳ ಸೇವನೆ, ಮಾರಾಟ ಹಾಗೂ ಕಳ್ಳ ಸಾಗಾಣಿಕೆ ವಿರುಧ್ದ ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸುತ್ತಿದ್ದು, ಅಭಿಯಾನದ ರೂಪದಲ್ಲಿ ಪಿಡುಗಿನ ವಿರುದ್ಧ ಹೋರಾಟ ನಡೆಸಲು ಸಮಾಜದ ಎಲ್ಲಾ ವರ್ಗದ ಜನತೆ ಕೈ ಜೋಡಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಳೆದ ವರ್ಷ ಸುಮಾರು 8505 ಮೊಕದ್ದಮೆಗಳನ್ನು ದಾಖಲಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಕಳೆದ 12 ತಿಂಗಳ ಅವಧಿಯಲ್ಲಿ ಒಟ್ಟು 7846 ಮಂದಿಯನ್ನು ಬಂಧಿಸಲಾಗಿದೆ. ವಶಪಡಿಸಿಕೊಳ್ಳಲಾದ ಮಾದಕ ದ್ರವ್ಯ ಸರಕನ್ನು ನ್ಯಾಯಾಲಯದಿಂದ ಅನುಮತಿ ಪಡೆದು ನಾಶ ಪಡಿಸಲಾಗುವುದು ಎಂದರು.
ದೇಶದೊಳಕ್ಕೆ ಮಾದಕ ದ್ರವ್ಯ ವಸ್ತುಗಳನ್ನು ಅಕ್ರಮವಾಗಿ ಸಾಗಿಸಿ ದೇಶದ ಯುವ ಜನತೆಯನ್ನು ಗುರಿ ಮಾಡಿಕೊಂಡು ಸಮಾಜವನ್ನು ದುರ್ಬಲಗೊಳಿಸುವ ಹುನ್ನಾರ ಇದೆ. ರಾಜ್ಯ ಗೃಹ ಇಲಾಖೆ ಮಾದಕ ವಸ್ತುಗಳ ವಿರುದ್ಧ ಜನ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದೆ ಎಂದರು.