ಕಳೆದ ಬಾರಿ ರಾಜ್ಯದಲ್ಲಿ ವ್ಯಾಪಕ ಮಳೆಯಾಗದ ಕಾರಣ ತೀವ್ರ ಬರಗಾಲ ಆವರಿಸಿದ್ದು, ಇದರಿಂದ ರೈತರು ತೀವ್ರ ಸಂಕಷ್ಟ ಎದುರಿಸಿದ್ದರು. ಬ್ಯಾಂಕುಗಳಿಂದ ಸಾಲಸೋಲ ಮಾಡಿ ಬೆಳೆದ ಬೆಳೆ ನೀರಿಲ್ಲದೆ ಒಣಗಿ ಹೋಗಿತ್ತು. ಹೀಗಾಗಿ ಬರಪೀಡಿತ ಪ್ರದೇಶದ ರೈತರ ನೆರವಿಗೆ ಧಾವಿಸಿದ್ದ ರಾಜ್ಯ ಸರ್ಕಾರ, ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿತ್ತು.
ಬರ ಪರಿಹಾರದ ಹಣ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದ್ದು ಇದರ ಮಧ್ಯೆ ಯಾದಗಿರಿ ಹಾಗೂ ಧಾರವಾಡದಲ್ಲಿ ಈ ಮೊದಲು ರೈತರಿಗೆ ಬೆಳೆ ಸಾಲ ವಿತರಿಸಿದ್ದ ಬ್ಯಾಂಕುಗಳು, ಈ ರೈತರಿಗೆ ಬಂದ ಬರ ಪರಿಹಾರದ ಹಣವನ್ನು ಆ ಸಾಲಕ್ಕೆ ಜಮಾ ಮಾಡಿಕೊಂಡಿದ್ದವು.
ಬರ ಪರಿಹಾರದ ಹಣವನ್ನು ಬೆಳೆ ಸಾಲಕ್ಕೆ ಬ್ಯಾಂಕುಗಳು ಹೊಂದಾಣಿಕೆ ಮಾಡಿಕೊಳ್ಳುತ್ತಿವೆ ಎಂಬ ವಿಷಯ ಬಹಿರಂಗವಾಗುತ್ತಲೇ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಯಾದಗಿರಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗಳು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಪತ್ರ ಬರೆದು ಬರ ಪರಿಹಾರದ ಹಣವನ್ನು ಬೆಳೆ ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡರೆ ಅಂತಹ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ಕ್ರಮದಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.